ಸೂರ್ಯೋದಯ ಹಾಗೂ ಸೂರ್ಯಾಸ್ತ ದಿನ ಹಾಗೂ ರಾತ್ರಿಯ ನೆಮ್ಮದಿಯ ಸಮಯ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಸೂರ್ಯಾಸ್ತದ ವೇಳೆ ಕೆಲ ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಒಂದು ವೇಳೆ ಆ ಕೆಲಸಗಳನ್ನು ಮಾಡಿದ್ರೆ ಆರ್ಥಿಕ ನಷ್ಟದ ಜೊತೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಾಳಾಗುತ್ತದೆ.
ಸಾಮಾನ್ಯವಾಗಿ ಪ್ರತಿ ದಿನ ತುಳಸಿ ಪೂಜೆ ಮಾಡುವ ಮನೆಯಲ್ಲಿ ಯಾವುದೇ ಸಮಸ್ಯೆಯಿರುವುದಿಲ್ಲ. ತಾಯಿ ಲಕ್ಷ್ಮಿ ಸದಾ ಆ ಮನೆಯಲ್ಲಿ ನೆಲೆಸಿರುತ್ತಾಳೆ. ಆದ್ರೆ ಸಂಜೆ ತುಳಸಿ ಸ್ಪರ್ಶ ಮಾಡಿದ್ರೆ ಲಕ್ಷ್ಮಿ ಕೋಪಗೊಳ್ತಾಳೆ. ಹಾಗಾಗಿ ರಾತ್ರಿ ತುಳಸಿಯನ್ನು ಅಪ್ಪಿತಪ್ಪಿಯೂ ಮುಟ್ಟಬೇಡಿ. ಹಾಗೆ ಸೂರ್ಯಾಸ್ತದ ವೇಳೆ ಹಾಗೂ ನಂತ್ರ ತುಳಸಿಗೆ ಯಾವುದೇ ಕಾರಣಕ್ಕೂ ನೀರನ್ನು ಹಾಕಬಾರದು.
ಸಾಮಾನ್ಯವಾಗಿ ಸೂರ್ಯಾಸ್ತದ ವೇಳೆ ದೀಪ ಹಚ್ಚಲಾಗುತ್ತದೆ. ಕೆಲವರು ಮೊದಲು ದೇವರಿಗೆ ದೀಪ ಹಚ್ಚಿ ನಂತ್ರ ತುಳಸಿಗೆ ದೀಪ ಬೆಳಗುತ್ತಾರೆ. ಇದು ತಪ್ಪು. ಮೊದಲು ತುಳಸಿಗೆ ದೀಪ ಬೆಳಗಿ ನಂತ್ರ ಒಂದು ದೀಪವನ್ನು ಮನೆಯಲ್ಲಿ ಹಚ್ಚಿ ನಂತ್ರ ದೇವರಿಗೆ ದೀಪ ಹಚ್ಚಿ ಪೂಜೆ ಮಾಡಬೇಕು.
ಸೂರ್ಯಾಸ್ತದ ವೇಳೆ ಆಹಾರ ಸೇವನೆ ಮಾಡಬಾರದು. ಹಾಗೆ ಮಲಗಿ ನಿದ್ರೆ ಮಾಡಬಾರದು. ಸೂರ್ಯಾಸ್ತದ ವೇಳೆ ಮಲಗಿ ನಿದ್ರೆ ಮಾಡಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಬೊಜ್ಜು ಸೇರಿದಂತೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಮನೆಯನ್ನು ದುರ್ಭಾಗ್ಯ ಆವರಿಸುತ್ತದೆ. ಹಾಗೆ ಸೂರ್ಯಾಸ್ತದ ವೇಳೆ ಶಾರೀರಿಕ ಸಂಬಂಧವನ್ನು ಬೆಳೆಸಬಾರದು.