1968ರ ಸೂಪರ್ ಹಿಟ್ ಹಾಲಿವುಡ್ ಸಿನೆಮಾ ರೋಮಿಯೋ & ಜೂಲಿಯೆಟ್ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ನಾಯಕ ಹಾಗೂ ನಾಯಕಿ ಪ್ಯಾರಾಮೌಂಟ್ ಪಿಕ್ಚರ್ಸ್ ವಿರುದ್ಧ 500 ಮಿಲಿಯನ್ ಡಾಲರ್ ಅಂದರೆ ಸುಮಾರು 41 ಕೋಟಿ ರೂಪಾಯಿ ಪರಿಹಾರ ಕೋರಿ ಕೇಸ್ ದಾಖಲಿಸಿದ್ದಾರೆ.
ಚಿತ್ರ ಬಿಡುಗಡೆಯಾಗಿ 50 ವರ್ಷಗಳ ಬಳಿಕ ಪ್ರಕರಣ ದಾಖಲು ಮಾಡಿದ್ದಾರೆ. ಚಿತ್ರದಲ್ಲಿ ನಗ್ನ ದೃಶ್ಯವನ್ನು ಚಿತ್ರೀಕರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮಗೆ ವಂಚಿಸಿ ನಗ್ನ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಅನ್ನೋದು ಅವರ ವಾದ.
ಆ ಸಂದರ್ಭದಲ್ಲಿ ನಾಯಕ ಲಿಯೊನಾರ್ಡೊ ವೈಟಿಂಗ್‌ಗೆ 16 ವರ್ಷ, ನಾಯಕಿ ಒಲಿವಿಯಾ ಹಸ್ಸಿಗೆ ಕೇವಲ 15 ವರ್ಷವಾಗಿತ್ತು. ಅಪ್ರಾಪ್ತರಾಗಿದ್ದರಿಂದ ನಗ್ನ ದೃಶ್ಯಗಳ ಗಂಭೀರತೆ ತಮ್ಮ ಅರಿವಿಗೆ ಬರಲಿಲ್ಲ, ತಮಗೆ ಮೋಸವಾಗಿದೆ ಎಂದು ದೂರಿನಲ್ಲಿ ಲಿಯೊನಾರ್ಡೊ ಹಾಗೂ ಒಲಿವಿಯಾ ಉಲ್ಲೇಖಿಸಿದ್ದಾರೆ. ಸದ್ಯ ನಾಯಕ ಲಿಯೊನಾರ್ಡೊ ವೈಟಿಂಗ್‌ಗೆ 72 ವರ್ಷ, ಒಲಿವಿಯಾಗೆ 71 ವರ್ಷ. ಇವರು ನಿರ್ಮಾಪಕರ ವಿರುದ್ಧ ಲಾಸ್ ಏಂಜಲೀಸ್ ಕೌಂಟಿಯ ಸುಪೀರಿಯರ್ ಕೋರ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.
ಅರ್ಜಿಯ ಪ್ರಕಾರ ಚಿತ್ರದ ನಿರ್ದೇಶಕ ಫ್ರಾಂಕೋ ಜಾಫಿರೆಲ್ಲಿ, ಬೆಡ್ ರೂಮ್ ಸೀನ್ ಚಿತ್ರೀಕರಿಸುವಾಗ ತಮಗೆ ಚರ್ಮದ ಬಣ್ಣದ ಒಳ ಉಡುಪುಗಳನ್ನು ಕೊಡುವುದಾಗಿ ಹೇಳಿದ್ದರು, ಆದರೆ ಬಟ್ಟೆ ಕೊಟ್ಟಿಲ್ಲ.ದೃಶ್ಯವನ್ನು ಚಿತ್ರೀಕರಿಸುವಾಗ, ಕ್ಯಾಮರಾ ಆಂಗಲ್‌ನಲ್ಲಿ ನಗ್ನತೆ ಗೋಚರಿಸುವುದಿಲ್ಲ ಎಂದು ಜಾಫಿರೆಲ್ಲಿ ಭರವಸೆ ನೀಡಿದರು. ಆದರೆ ಇದೆಲ್ಲವೂ ಸುಳ್ಳಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ರೆ ನಿರ್ದೇಶಕ ಫ್ರಾಂಕೊ ಜಾಫಿರೆಲ್ಲಿ 2019 ರಲ್ಲಿ ನಿಧನರಾಗಿದ್ದಾರೆ.ಶೂಟಿಂಗ್ ವೇಳೆ ಲಿಯೊನಾರ್ಡೊ ಮತ್ತು ಒಲಿವಿಯಾಗೆ ನಗ್ನವಾಗಿಯೇ ನಟಿಸುವಂತೆ ನಿರ್ದೇಶಕರು ಸೂಚಿಸಿದ್ದರಂತೆ. ಆ ಸಮಯದಲ್ಲಿ ನಿರ್ದೇಶಕರ ಆದೇಶ ಪಾಲಿಸದೇ ಬೇರೆ ವಿಧಿಯಿರಲಿಲ್ಲ ಅಂತಾ ಇಬ್ಬರೂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ದಶಕಗಳ ಕಾಲ ಈ ದೃಶ್ಯದಿಂದಾಗಿ ಮಾನಸಿಕ ಮತ್ತು ಭಾವನಾತ್ಮಕ ಯಾತನೆ ಅನುಭವಿಸಿದ್ದೇವೆ ಅಂತಾ ದೂರಿನಲ್ಲಿ ಹೇಳಿದ್ದಾರೆ.