ಘಂ ಎನ್ನುವ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಆದರೆ ಈ ಸಾಂಬಾರು ಪುಡಿಯನ್ನು ಮಾಡುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಯಾವುದಾದರೂ ಒಂದು ಮಸಾಲಾ ಪದಾರ್ಥ ಹೆಚ್ಚು ಕಡಿಮೆಯಾದರೆ ಸಾಂಬಾರಿನ ರುಚಿ ಹಾಳಾಗುತ್ತೆ.
ಅಂಗಡಿಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಒಮ್ಮೆ ಈ ಸಾಂಬಾರು ಪುಡಿಯನ್ನು ಮಾಡಿನೋಡಿ. ಬಾಯಿ ಚಪ್ಪರಿಸಿಕೊಂಡು ಊಟ ಮಾಡಬಹುದು.
ಬೇಕಾಗುವ ಸಾಮಾಗ್ರಿ: ಕೊತ್ತಂಬರಿ ಬೀಜ-3/4 ಕಪ್, ಕೆಂಪು ಮೆಣಸು-3 ಕಪ್, ಮೆಂತೆ-1 ಟೇಬಲ್ ಸ್ಪೂನ್, ಉದ್ದಿನಬೇಳೆ-1/4 ಕಪ್, ತೊಗರಿ ಬೇಳೆ-1/4 ಕಪ್, ಕಡಲೇಬೇಳೆ-1/4 ಕಪ್, ಕಾಳು ಮೆಣಸು-1/8 ಕಪ್, ಜೀರಿಗೆ-1/8 ಕಪ್, ಸಾಸಿವೆ ಕಾಳು-1 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಕೆಂಪು ಮೆಣಸು, ಉದ್ದಿನ ಬೇಳೆಯನ್ನು ಒಟ್ಟು ಸೇರಿಸಿ ಹುರಿಯಿರಿ. ಮೆಣಸಿನ ಬಣ್ಣ ಬದಲಾಗುವವರೆಗೆ ಹುರಿಯಿರಿ. ಉದ್ದಿನ ಬೇಳೆ ಹದವಾಗಿ ಪರಿಮಳ ಬರಬೇಕು. ನಂತರ ಕಾಳು ಮೆಣಸು ಹುರಿಯಿರಿ. ನಂತರ ಕೊತ್ತಂಬರಿ ಕಾಳು, ಜೀರಿಗೆ, ಮೆಂತೆ, ಕಡಲೆಬೇಳೆ, ಸಾಸಿವೆ, ತೊಗರಿ ಬೇಳೆ ಎಲ್ಲವನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ.
ಹುರಿದಿಟ್ಟುಕೊಂಡ ಸಾಮಾಗ್ರಿಗಳೆಲ್ಲಾ ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ. ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ. ಸಾಂಬಾರು ಮಾಡುವಾಗ ಇದನ್ನು ಬಳಸಿಕೊಳ್ಳಿ.