ಹೆಸರು ಬೇಳೆ ಕಿಚಡಿ ಇದೊಂದು ಆರೋಗ್ಯಕರವಾದ ತಿನಿಸು. ಜತೆಗೆ ಸುಲಭವಾಗಿ ಮಾಡಿಬಿಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದನ್ನು ತಿನ್ನಬಹುದು. ಸರಿಯಾಗಿ ಜೀರ್ಣ ಕ್ರಿಯೆ ಆಗದೇ ಇದ್ದಾಗ ಇದನ್ನು ಮಾಡಿಕೊಂಡು ತಿನ್ನಬಹುದು. ಹಾಗೇ ಇದನ್ನು ಬೇಳೆಕಾಳನ್ನು ಉಪಯೋಗಿಸಿಕೊಂಡು ಮಾಡುವುದರಿಂದ ಸ್ವಾದಿಷ್ಟವಾಗಿರುತ್ತದೆ. ಮಾಡುವ ವಿಧಾನ ಹೇಗೆಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು :
½ ಕಪ್ ಹೆಸರುಬೇಳೆ, ½ ಕಪ್ ಅಕ್ಕಿ, 1 ಟೊಮೆಟೊ, 1 ಈರುಳ್ಳಿ ಸಣ್ಣಗೆ ಹೆಚ್ಚಿಕೊಂಡಿದ್ದು, 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಹಸಿಮೆಣಸು, ಚಿಟಕೆ ಅರಿಶಿನ, ಚಿಟಿಕೆ ಇಂಗು, 1 ಟಿ ಸ್ಪೂನ್ ಜೀರಿಗೆ, 1 ಟೇಬಲ್ ಸ್ಪೂನ್ ತುಪ್ಪ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ಮೊದಲಿಗೆ ಅಕ್ಕಿ ಮತ್ತು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಬೇರೆ ಬೇರೆಯಾಗಿ ಅರ್ಧ ಗಂಟೆ ನೆನೆಸಿಟ್ಟುಕೊಂಡಿರಿ. ನಂತರ ಒಂದು ಕುಕ್ಕರ್ ತೆಗೆದುಕೊಂಡು ಅದನ್ನು ಗ್ಯಾಸ್ ಮೇಲೆ ಇಡಿ. ಆಮೇಲೆ ಅದಕ್ಕೆ 1 ಟೇಬಲ್ ಸ್ಪೂನ್ ತುಪ್ಪ ಹಾಕಿ. ಅದು ಬಿಸಿಯಾದ ನಂತರ ಜೀರಿಗೆ ಹಾಗೂ ಹಿಂಗು ಸೇರಿಸಿ. ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಅದು ತುಸು ಬಣ್ಣ ಬದಲಾದ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಚೆನ್ನಾಗಿ ತಿರುಗಿಸಿ.
ನಂತರ ಟೊಮೆಟೊ ಹಾಕಿ ಅದಕ್ಕೆ ಉಪ್ಪು, ಅರಿಶಿನ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಚೆನ್ನಾಗಿ ತಿರುಗಿಸಿ. ನಂತರ ಅಕ್ಕಿ ಮತ್ತು ಹೆಸರು ಬೇಳೆಯನ್ನು ಹಾಕಿ ಕೈಯಾಡಿಸಿ. ಹೆಸರು ಬೇಳೆ ಪರಿಮಳ ಬರುವವರೆಗೆ ತುಸು ಹುರಿದುಕೊಳ್ಳಿ. ನಂತರ ನೀರು 5 ಕಪ್ ಸೇರಿಸಿ 4 ವಿಷಲ್ ಬರಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ನಂತರ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಕರವಾದ ಕಿಚಡಿ ರೆಡಿ.