ಮಳೆಗಾಲದಲ್ಲಿ ಟೀ ಜೊತೆಗೆ ಕುರುಕುಲು ತಿಂಡಿ ಇದ್ದರೆ, ಚೆಂದ. ಅದೇ ರೀತಿ ಟೀ ಜೊತೆಗೆ ವೆಜಿಟೇಬಲ್ ಬೋಂಡಾ ಇದ್ದರೆ ಇನ್ನೂ ಚೆಂದ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬೋಂಡಾ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು: ಕಡಲೆ ಹಿಟ್ಟು- ಅರ್ಧ ಕೆ.ಜಿ., ಮೈದಾ ಹಿಟ್ಟು- 100 ಗ್ರಾಂ, ಗೋಡಂಬಿ- 25 ಗ್ರಾಂ, ಉಪ್ಪು- ರುಚಿಗೆ ತಕ್ಕಷ್ಟು, ಹಸಿಮೆಣಸಿನಕಾಯಿ- 10, ಅಚ್ಚ ಮೆಣಸಿನ ಪುಡಿ- 2 ಚಮಚ, ಆಲೂಗಡ್ಡೆ- ಅರ್ಧ ಕೆ.ಜಿ., ಎಲೆ ಕೋಸು- 100 ಗ್ರಾಂ, ಹುರುಳಿಕಾಯಿ- 100 ಗ್ರಾಂ, ಹಸಿ ಬಟಾಣಿ- 100 ಗ್ರಾಂ, ಈರುಳ್ಳಿ- 2, ಅರಿಶಿಣ ಪುಡಿ- ಸ್ವಲ್ಪ, ಕರಿ ಬೇವು- 1 ಎಸಳು, ಅಡಿಗೆ ಸೋಡಾ- 1 ಚಿಟಿಕೆ, ಲಿಂಬೆಹಣ್ಣು- 1 ಹೋಳು, ಜೊತೆಗೆ ಕರಿಯಲು ತಕ್ಕಷ್ಟು ಎಣ್ಣೆ.
ತಯಾರಿಸುವ ವಿಧಾನ: ತರಕಾರಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ. ಬಟಾಣಿಯನ್ನು ಬಿಡಿಸಿಕೊಳ್ಲಿ, ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಒಲೆಯ ಮೇಲಿಡಿ. ಕಾದ ಮೇಲೆ ಸಾಸಿವೆ ಹಾಕಿ ಬಳಿಕ ಮೆಣಸಿನ ಕಾಯಿ. ಕರಿಬೇವು ಸೊಪ್ಪು ಹಾಕಿರಿ. ನಂತರದಲ್ಲಿ ಹೆಚ್ಚಿದ ತರಕಾರಿ, ಈರುಳ್ಳಿ, ಬಟಾಣಿಗಳನ್ನು ಹಾಕಿ ಕಲೆಸಿ, ಸ್ವಲ್ಪ ನೀರನ್ನು ಹಾಕಿರಿ.
ಸ್ವಲ್ಪ ಬೆಂದ ನಂತರದಲ್ಲಿ ಉಪ್ಪು, ಅರಿಶಿಣ ಲಿಂಬೆರಸ ಹಾಕಿ ಕಲೆಸಿರಿ. ಚೆನ್ನಾಗಿ ಬೆಂದು ಪಲ್ಯದ ರೀತಿ ಆದ ನಂತರ ಕೆಳಗಿಳಿಸಿರಿ. ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಮೈದಾ ಹಿಟ್ಟು, ಅಡಿಗೆ ಸೋಡಾ, ಉಪ್ಪಿನ ಪುಡಿ, ಮೆಣಸಿನ ಪುಡಿ, ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿರಿ.
ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಕಲೆಸಿ ಉಂಡೆ ಮಾಡಿಕೊಂಡು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಕೆಂಪಗೆ ಕಾದ ನಂತರ ತೆಗೆಯಿರಿ. ನಿಮಗೆ ಬಿಸಿ ಬಿಸಿ ವೆಜಿಟೇಬಲ್ ಬೋಂಡಾ ತಿನ್ನಲು ಈಗ ಸಿದ್ಧ.