ದಿನಾ ತರಕಾರಿ ಸಾರು, ಸಾಂಬಾರು ತಿಂದು ಬೇಜಾರು ಎಂದುಕೊಂಡವರು ರುಚಿಕರವಾದ ಮಾವಿನಕಾಯಿ ಗೊಜ್ಜು ಮಾಡಿಕೊಂಡು ಸವಿಯಿರಿ. ಇದನ್ನು ಮಾಡುವುದಕ್ಕೂ ಕಷ್ಟವಿಲ್ಲ. ಕಡಿಮೆ ಸಾಮಾಗ್ರಿಯಲ್ಲಿ ಮಾಡಿಬಿಡಬಹುದು.
ಒಂದು ಪ್ಯಾನ್ ಗೆ 2 ಟೀ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ¼ ಟೀ ಸ್ಪೂನ್ ಸಾಸಿವೆ ಹಾಕಿ, 5 ಕಾಳು ಮೆಂತೆ ಹಾಕಿ. ನಂತರ 5 ಎಸಳು ಕರಿಬೇವು, 1 ಒಣ ಮೆಣಸನ್ನು ಸೇರಿಸಿ. ನಂತರ ಒಂದು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಿ. ಅದನ್ನು ಈ ಒಗ್ಗರಣೆಗೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ¼ ಟಿ ಸ್ಪೂನ್ ಅರಿಶಿನ ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ¾ ಕಪ್ ನೀರು ಸ್ವಲ್ಪ ಉಪ್ಪು ಸೇರಿಸಿ ಒಂದು ಪ್ಲೇಟ್ ಮುಚ್ಚಿ ಬೇಯಲು ಬಿಡಿ. ನಂತರ ಇದಕ್ಕೆ 2 ಚಮಚದಷ್ಟು ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ 1 ಟೇಬಲ್ ಸ್ಪೂನ್ ನಷ್ಟು ಬೆಲ್ಲ ಸೇರಿಸಿ ಕುದಿಸಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿ ಅನ್ನದ ಜತೆ ಇದನ್ನು ಸವಿಯಲು ರುಚಿಕರವಾಗಿರುತ್ತದೆ.