ಪ್ರತಿಯೊಬ್ಬರಿಗೂ ಅವರದ್ದೇ ಆದಂತಹ ನಿದ್ರಾ ಕ್ರಮವಿರುತ್ತದೆ. ಕೆಲವರಿಗೆ 8-10 ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ ಮತ್ತು ಇನ್ನು ಕೆಲವರಿಗೆ ಕೇವಲ 6 ಗಂಟೆಗಳ ಕಾಲ ನಿದ್ರೆ ಮಾಡಿದರೂ ಉಲ್ಲಾಸದಿಂದಿರುತ್ತಾರೆ. ನಿದ್ರೆಯು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಚೆನ್ನಾಗಿ ನಿದ್ರೆ ಮಾಡಿದರೆ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು.
ನಿಮಗೆ ತಿಳಿದಿದೆಯೇ…? ನಾವು ಸೇವಿಸುವ ಆಹಾರ ಕ್ರಮವೂ ಕೂಡ ಕೆಲವೊಮ್ಮೆ ನಮ್ಮ ನಿದ್ರೆಗೆ ಅಡ್ಡಿ ಮಾಡಬಹುದು. ಆದ್ದರಿಂದ ಉತ್ತಮ ನಿದ್ರೆಗೆ ಸಹಾಯ ಮಾಡುವ ಕೆಲವು ಸೂಪರ್ ಫುಡ್ ಗಳ ಬಗ್ಗೆ ತಿಳಿದುಕೊಳ್ಳೋಣ.
ಹಾಲು : ಸರಿಯಾದ ನಿದ್ರೆ ನಿಮ್ಮದಾಗಬೇಕಿದ್ದಲ್ಲಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲನ್ನು ಕುಡಿಯಿರಿ. ಇದರಲ್ಲಿರುವ ಟ್ರಿಪ್ಟೊಫಾನ್ ಅಂಶವು ನಿದ್ರೆಯನ್ನು ಪ್ರಚೋದಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಒತ್ತಡವನ್ನು ಕಡಿಮೆ ಮಾಡಿ ಮೆದುಳಿನ ನರಗಳನ್ನು ಸ್ಥಿರಗೊಳಿಸುತ್ತದೆ.
ಬಾಳೆಹಣ್ಣು : ಉತ್ತಮ ನಿದ್ದೆಗೆ ಬಾಳೆಹಣ್ಣು ಕೂಡ ಒಳ್ಳೆಯದು. ಇದರಲ್ಲಿ ಟ್ರಿಪ್ಟೊಫಾನ್, ವಿಟಮಿನ್ ಬಿ, ಮೆಗ್ನೀಷಿಯಂ, ಪೊಟ್ಯಾಷಿಯಂ ಅಂಶಗಳಿವೆ. ಇವು ಸ್ನಾಯುಗಳನ್ನು ಸಡಿಲಗೊಳಿಸಿ, ದೇಹಕ್ಕೆ ವಿಶ್ರಾಂತಿ ನೀಡಿ ಉತ್ತಮ ನಿದ್ದೆಗೆ ಅನುವು ಮಾಡಿಕೊಡುತ್ತದೆ.
ವಾಲ್ ನಟ್ಸ್ : ಇದರಲ್ಲಿ ಮೆಲಟೊನಿನ್ ಎಂಬ ಅಂಶವಿರುವುದರಿಂದ, ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
ಕುಂಬಳಕಾಯಿ ಬೀಜಗಳು : ಹೆಚ್ಚಿನ ಪ್ರಮಾಣದಲ್ಲಿ ಅಮೈನೋ ಆಸಿಡ್ ಟ್ರಿಪ್ಟೊಫಾನ್ ಅನ್ನು ಹೊಂದಿರುವುದರಿಂದ ಇದು ನಿಮಗೆ ನಿದ್ದೆ ಮಾಡಲು ಪ್ರೇರೇಪಿಸುತ್ತದೆ. ಮಲಗುವ ಕೆಲವು ಗಂಟೆಗಳ ಮುಂಚೆ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಟ್ರಿಪ್ಟೊಫಾನ್ ನಿದ್ದೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿದ್ರೆಗೆ ಸಂಬಂಧಪಟ್ಟ ಹಾರ್ಮೋನ್ ಆದ ಮೆಲಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.