
ಪ್ರಪಂಚದಾದ್ಯಂತದ ಇರುವ ಅನೇಕ ಸರೋವರಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಈ ಸರೋವರ ಅವುಗಳಿಗಿಂತ ಡಿಫರೆಂಟ್ ಆಗಿದೆ. ಈ ಸರೋವರದೊಳಗೆ ಸುಂದರವಾದ ಕಾಡು ಕೂಡ ಇದೆ. ಈ ವಿಶಿಷ್ಟ ಸರೋವರ ಇರೋದು ಕಝಕಿಸ್ತಾನದಲ್ಲಿ. ಇದರ ಹೆಸರು ‘ಲೇಕ್ ಕ್ಯಾಂಡಿ'(kaindy).
ಕ್ಯಾಂಡಿ ಸರೋವರವು ಕಝಾಕಿಸ್ತಾನದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದು. ಈ ಲೇಕ್ ನ ಸೌಂದರ್ಯ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಸರೋವರವನ್ನು ನೋಡಿದ್ರೆ ಇಡೀ ಕಾಡು ಅದರೊಳಗೆ ನೆಲೆಸಿದೆ ಮತ್ತು ನೀರಿನಲ್ಲಿಯೇ ಮರಗಳು ಬೆಳೆದಿವೆ ಎಂದು ನಿಮಗೆ ಅನಿಸಬಹುದು.
ವಾಸ್ತವವಾಗಿ, ಮರಗಳ ಕಾಂಡಗಳು ಈ ಸರೋವರದಲ್ಲಿ ಮುಳುಗಿಕೊಂಡಿವೆ. ಹಾಗಾಗಿ ನೀರಲ್ಲೇ ಅರಣ್ಯ ತಲೆಕೆಳಗಾಗಿರುವಂತೆ ಭಾಸವಾಗುತ್ತದೆ. ಈ ಕೆರೆಯ ಕಥೆಯೇ ಅಷ್ಟು ರೋಚಕವಾಗಿದೆ. 1911ರಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಇಡೀ ಪ್ರದೇಶವು ಜಲಾವೃತವಾಗಿತ್ತು. ಮರಗಳಿಂದ ಆವೃತವಾಗಿದ್ದ ಅರಣ್ಯವೂ ನೀರಿನಲ್ಲಿ ಮುಳುಗಿತು.

ಈ ಸರೋವರ ಸಮುದ್ರ ಮಟ್ಟದಿಂದ ಸುಮಾರು 2,000 ಮೀಟರ್ ಎತ್ತರದಲ್ಲಿದೆ ಮತ್ತು ಕಝಕಿಸ್ತಾನ್‌ದ ಅಲ್ಮಾಟಿ ನಗರದಿಂದ 291 ಕಿಲೋಮೀಟರ್ ದೂರದಲ್ಲಿದೆ. ಕ್ಯಾಂಡಿ ಸರೋವರದ ಮತ್ತೊಂದು ವಿಶೇಷತೆ ಅಂದ್ರೆ ಇಲ್ಲಿ ನೀರು ತುಂಬಾ ತಂಪಾಗಿರುತ್ತದೆ. ಇದನ್ನು ಸ್ಪರ್ಷಿಸಿದ್ರೆ ಫ್ರಿಡ್ಜ್ ನಲ್ಲಿಟ್ಟ ನೀರನ್ನು ಮುಟ್ಟಿದಂತಾಗುತ್ತದೆ. ಈ ಸರೋವರವು ಚಳಿಗಾಲದಲ್ಲಿ ಐಸ್ ಡೈವಿಂಗ್ ಮತ್ತು ಮೀನುಗಾರಿಕೆಗೆ ಜನರ ನೆಚ್ಚಿನ ಸ್ಥಳವಾಗಿದೆ.