ನೇಲ್ ಆರ್ಟ್ ಇತ್ತೀಚೆಗೆ ಅತಿ ಜನಪ್ರಿಯತೆ ಪಡೆಯುತ್ತಿರುವ ಫ್ಯಾಷನ್ ಟ್ರೆಂಡ್..! ಮೊದಲು ಉದ್ದುದ್ದ ಉಗುರು ಬಿಟ್ಟಿರುವ ಸುಂದರಿಯ ಕೋಮಲ ಕೈಗಳಲ್ಲಿ ಪ್ಲೇನ್ ನೇಲ್ ಪಾಲಿಶ್‌ಗಳು ಕಾಣ ಸಿಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ.
ಪ್ಲೇನ್ ನೇಲ್ ಪಾಲಿಶ್ ಬದಲಿಗೆ ನೇಲ್ ಆರ್ಟ್ ಫ್ಯಾಷನ್ ಪ್ರಿಯ ಮಾನಿನಿಯರನ್ನ ಅಟ್ರಾಕ್ಟ್ ಮಾಡುತ್ತಿದೆ. ಪುಟ್ಟ ಪುಟ್ಟ ಕಾಸ್ಮೆಟಿಕ್ಸ್ ಶಾಪ್‌ಗಳು, ಫ್ಯಾನ್ಸಿ ಸ್ಟೋರ್ಸ್‌ಗಳಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿಯೂ ಕೂಡ ವಿವಿಧ ದರ್ಜೆಯ ವಿವಿಧ ಬಣ್ಣದ ನೇಲ್ ಆರ್ಟ್ ಸಲಕರಣೆಗಳು, ಅದಕ್ಕೆ ಬಳಸುವ ವಿಶೇಷ ನೇಲ್ ಪಾಲಿಶ್‌ಗಳು, ಸ್ಟೋನ್ಸ್, ಸ್ಟಿಕ್ಕರ್ಸ್, ಮೋಲ್ಡ್ಸ್ ಏನೆಲ್ಲ ದೊರಕುತ್ತಿವೆ.
ಇತ್ತೀಚೆಗೆ ಹಲವಾರು ಬ್ಯೂಟಿ ಪಾರ್ಲರ್ ಗಳಲ್ಲಿ ಕೂಡ ವಿಶೇಷವಾಗಿ ನೇಲ್ ಆರ್ಟಿಸ್ಟ್‌ಗಳನ್ನೇ ನೇಮಿಸಿಕೊಂಡಿದ್ದಾರೆ. ಯೂಟ್ಯೂಬ್ ಸೇರಿದಂತೆ ಹಲವು ವೆಬ್ ಸೈಟ್ ಗಳಲ್ಲಿ ನೇಲ್ ಆರ್ಟ್ ಮಾಡುವ ಬಗ್ಗೆ ಅದೆಷ್ಟೋ ವಿಡಿಯೋಗಳೂ ಇವೆ. ಮದುವೆ, ನಿಶ್ಚಿತಾರ್ಥದಂಥ ಸಮಾರಂಭಗಳಿಗಾಗಿ ಸಿದ್ಧಗೊಳ್ಳುವ ಹೆಂಗಳೆಯರು ಮೊದಲು ಮೆಹೆಂದಿ ಹಾಕಿಸಿಕೊಂಡು ನಂತರ ನೇಲ್ ಆರ್ಟಿಸ್ಟ್ ಬಳಿ ದಾಳಿ ಇಡುತ್ತಿದ್ದಾರೆ.
ಉಗುರಿನ ಮೇಲೆ ಅದ್ಭುತ ಚಿತ್ತಾರವನ್ನ ಬಿಡಿಸಿ, ಕೈ ಅಂದ ಹೆಚ್ಚಿಸುವ ಆ ಕೆಲಸ ಸುಲಭದ್ದಲ್ಲ. ಅತಿ ಸೂಕ್ಷ್ಮವಾಗಿ, ಅಷ್ಟೇ ಸಮರ್ಪಕವಾಗಿ, ಸಮಾರಂಭಕ್ಕೆ ಅವರು ಧರಿಸುವ ದಿರಿಸಿಗೆ ಸರಿ ಹೊಂದುವಂತೆ, ಅವರ ಉಡುಪಿನ ಬಣ್ಣಕ್ಕೆ ಒಪ್ಪುವಂತೆ ವಿವಿಧ ರೀತಿಯ ಹೊಸ ಹೊಸ ಚಿತ್ತಾರವನ್ನ ಬರೆಯುವ ಆ ವಿಶೇಷ ಕಲೆ ನಿಜಕ್ಕೂ ಅದ್ಬುತವೇ ಸರಿ..!