ಖದೀಮರು ಚಾಪೆ ಕೆಳಗೆ ನುಸುಳಿದ್ರೆ ಭದ್ರತಾ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳ್ತಾರೆ. ಇದಕ್ಕೆ ಸಾಕ್ಷಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರೋ ಕೋಟ್ಯಾಂತರ ರೂಪಾಯಿ ಮೌಲ್ಯದ ಡಾಲರ್. ಡ್ರಗ್ಸ್ ಹಾಗೂ ಚಿನ್ನವನ್ನು ವಂಚಕರು ಕಸ್ಟಮ್ಸ್ ಅಧಿಕಾರ ಕಣ್ತಪ್ಪಿಸಿ ತೆಗೆದುಕೊಂಡು ಬರಲು ದೇಹದಲ್ಲಿಯೂ ಅಡಗಿಸಿಟ್ಟುಕೊಂಡಿರುವ ಘಟನೆಗಳ ಬಗ್ಗೆ ಕೇಳಿರ್ತೀರಾ. ಅದೇ ರೀತಿ ಅಮೆರಿಕನ್ ಡಾಲರ್ ಅನ್ನು ಅಡಗಿಸಿಟ್ಟುಕೊಂಡಿದ್ದ ಮೂವರು ಸಿಕ್ಕಿಬಿದ್ದಿದ್ದಾರೆ.
ಇವರ ಬಳಿಯಿದ್ದ 4.1 ಕೋಟಿ ಮೌಲ್ಯದ 4,97,000 ಅಮೆರಿಕನ್ ಡಾಲರ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಖಚಿತ ಸುಳಿವಿನ ಮೇರೆಗೆ ವಿಮಾನ ನಿಲ್ದಾಣದ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯುನಿಟ್, ಬುಧವಾರ ಬೆಳಗ್ಗೆ ದುಬೈಗೆ ಹಾರಲು ಹೊರಟಿದ್ದ ಒಂದೇ ಕುಟುಂಬದ ಮೂವರನ್ನು ವಶಕ್ಕೆ ಪಡೆದಿತ್ತು.
ಅವರ ಸಾಮಾನು ಸರಂಜಾಮುಗಳನ್ನೆಲ್ಲ ಪರಿಶೀಲನೆ ಮಾಡಿದಾಗ ಸೀರೆಗಳು, ಪಾದರಕ್ಷೆಗಳು ಮತ್ತು ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ ಕೋಟಿ ಕೋಟಿ ಮೌಲ್ಯದ ಅಮೆರಿಕನ್ ಡಾಲರ್ ಪತ್ತೆಯಾಗಿದೆ. ಮೂವರನ್ನೂ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.