ಮನೆಯಲ್ಲಿ ಮಾಡುವ ಸಿಹಿ ತಿನಿಸು ನೈಜ ರುಚಿಯೊಂದಿಗೆ ಪರಿಪೂರ್ಣವಾಗಿ ಮೂಡಿ ಬರಬೇಕಿದ್ದರೆ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆಗ ಮಾತ್ರ ಸಿಹಿ ತಿನಿಸು ಇನ್ನಷ್ಟು ಸ್ವಾದಿಷ್ಟ ಮಯವಾಗಿರುತ್ತದೆ. ಇಲ್ಲಿವೆ ಸಿಹಿ ತಿಂಡಿಯ ರುಚಿ ಹೆಚ್ಚಿಸುವ ಕೆಲವು ಟಿಪ್ಸ್ ಗಳು.
* ಶಾವಿಗೆ ಪಾಯಸ ಮಾಡುವಾಗ ಹಾಲಿನೊಂದಿಗೆ ಹಾಲಿನ ಪುಡಿ ಸೇರಿಸಿದರೆ ಪಾಯಸ ಮಂದವಾಗಿರುತ್ತದೆ. ಶಾವಿಗೆಯನ್ನು ತುಪ್ಪದಲ್ಲಿ ಹುರಿದರೆ ಮುದ್ದೆ ಆಗುವುದಿಲ್ಲ.
* ಕೊಬ್ಬರಿಗೆ ಕೆನೆ ಸೇರಿಸಿ ಬರ್ಫಿ ಮಾಡಿದರೆ ಹೊಳೆಯುವ ಹಾಗೂ ಮೃದುವಾದ ಬರ್ಫಿ ತಯಾರಾಗುತ್ತದೆ.
* ಬೇಸನ್ ಉಂಡೆಗೆ ಕಡಲೆಬೇಳೆ ಹುರಿದು ಹಿಟ್ಟು ಮಾಡಿಸಿದರೆ ಹಿಟ್ಟು ಹುರಿಯುವ ಶ್ರಮ ಕಡಿಮೆಯಾಗುತ್ತದೆ. ಅಕ್ಕಿಹಿಟ್ಟು ಹಾಕಿಸಿದ ಮೇಲೆ ಈ ಕಡಲೆಬೇಳೆ ಹಾಕಿದರೆ ಅದರ ಬಣ್ಣ ಮತ್ತು ರುಚಿಯೂ ಭಿನ್ನವಾಗಿರುತ್ತದೆ.
* ಮೈಸೂರುಪಾಕ್ ಹಾಗೂ ಶೇಂಗಾ ಚಿಕ್ಕಿ ಮಾಡುವಾಗ ಕೊನೆಗೆ ಒಂದು ಚಿಟಿಕೆ ಅಡುಗೆ ಸೋಡಾ ಹಾಕಿದರೆ ತಿಂಡಿ ಟೊಳ್ಳಾಗಿ ಚೆನ್ನಾಗಿ ಆಗುತ್ತದೆ.
* ರವೆ ಉಂಡೆಯ ಪಾಕವನ್ನು ಅಗತ್ಯಕ್ಕಿಂತ ಸ್ವಲ್ಪ ತೆಳುವಾಗಿ ಮಾಡಿ ಅದರಲ್ಲಿ ರವೆ ನೆನೆಸಿಡಿ. ಇದು ಗಟ್ಟಿಯಾದಾಗ ಉಂಡೆ ಕಟ್ಟಿದರೆ ತುಂಬಾ ಮೃದುವಾಗುತ್ತದೆ. ಆ ಪಾಕಕ್ಕೆ ಸ್ವಲ್ಪ ಹಾಲು ಹಾಕಿದರೆ ರುಚಿಯೂ ಚೆನ್ನಾಗಿರುತ್ತದೆ.
* ಪುಟಾಣಿ ಅಥವಾ ಹುರಿಗಡಲೆಯ ಕರದಂಟು ಮಾಡುವಾಗ ಪಾಕಕ್ಕೆ ಸ್ವಲ್ಪ ಹಾಲು ಹಾಕಿದರೆ ಕರದಂಟು ಮೃದುವಾಗುತ್ತದೆ.