ದಿನಾ ಒಂದೇ ರೀತಿ ತಿಂಡಿ ಮಾಡಿ ಬೇಸರವಾದರೆ ಒಮ್ಮೆ ಸಿಹಿಯಾದ ಅಪ್ಪಂ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ ಈ ತಿನಿಸು.
ಬೇಕಾಗುವ ಸಾಮಾಗ್ರಿಗಳು:
¼ ಕಪ್- ಅಕ್ಕಿ ಹಿಟ್ಟು, ¼ ಕಪ್- ಗೋಧಿ ಹಿಟ್ಟು, ¼ ಕಪ್- ರವಾ, ½ ಕಪ್-ಬೆಲ್ಲ, 1/3 ಕಪ್-ತೆಂಗಿನಕಾಯಿ ಪೀಸ್, ¼ ಟೀ ಸ್ಪೂನ್-ಏಲಕ್ಕಿ ಪುಡಿ, ತುಪ್ಪ-ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ¼ ಕಪ್ ನೀರು ಹಾಕಿ, ಅದಕ್ಕೆ ಬೆಲ್ಲ ಹಾಕಿ ಬೆಲ್ಲ ಕರಗುವವರೆಗೆ ಚೆನ್ನಾಗಿ ಕುದಿಸಿಕೊಳ್ಳಿ.
ನಂತರ ಗ್ಯಾಸ್ ಆಫ್ ಮಾಡಿ ಬಳಿಕ ಇದನ್ನು ತಣ್ಣಗಾಗಲು ಬಿಟ್ಟುಬಿಡಿ. ನಂತರ ಒಂದು ಪ್ಯಾನ್ ಗೆ 1 ಟೀ ಸ್ಪೂನ್ ತುಪ್ಪ ಹಾಕಿ ಅದಕ್ಕೆ ತೆಂಗಿನಕಾಯಿ ಪೀಸ್ ಗಳನ್ನು ಸೇರಿಸಿ ಅದು ತುಸು ಬಣ್ಣ ಬದಲಾಗುವವರೆಗೆ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ.
ನಂತರ ಅದೇ ಪ್ಯಾನ್ ಗೆ 1 ಟೀ ಸ್ಪೂನ್ ತುಪ್ಪ ಸೇರಿಸಿ ರವೆಯನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಒಂದು ಬೌಲ್ ಗೆ ರವೆ, ಅಕ್ಕಿ ಹಿಟ್ಟು, ತೆಂಗಿಕಾಯಿ ಪೀಸ್, ಏಲಕ್ಕಿ ಪುಡಿ, ಬೆಲ್ಲದ ಪಾಕ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅರ್ಧ ಗಂಟೆ ಹಾಗೇ ಇಟ್ಟುಬಿಡಿ.
ಇದು ದೋಸೆ ಹಿಟ್ಟಿನ ಹದಕ್ಕೆ ಇರಲಿ. ನಂತರ ಅಪ್ಪಂ ತವಾ ತೆಗೆದುಕೊಂಡು ಅದರ ತೂತುಗಳಿಗೆ ತುಪ್ಪ ಸವರಿ ಈ ಹಿಟ್ಟಿನ ಮಿಶ್ರಣವನ್ನು ಆ ತೂತುಗಳ ಒಳಗೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ತುಪ್ಪದ ಜತೆ ಇದನ್ನು ಸವಿಯಿರಿ.