ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಸಿಹಿಪ್ರಿಯರಿಗಂತೂ ಸಂಭ್ರಮವೋ ಸಂಭ್ರಮ. ಬಾಯಲ್ಲಿ ನೀರು ಉಕ್ಕಿಸುವ ಗುಲಾಬ್ ಜಾಮೂನ್, ಸೌಗಂಧ ಬೀರುವ ಖೀರು, ತುಪ್ಪ ತುಳುಕುವ ಮೈಸೂರ್ ಪಾಕ್, ತಾಜಾ ತಾಜಾ ಜಹಾಂಗೀರ್, ಕೇಸರಿ ಲಡ್ಡುಗಳು, ಕಣ್ಣು ಕೋರೈಸುವ ಬರ್ಫಿಗಳು, ಲಾಡು, ರಾಸಮಲೈ, ಕಾಜುಕಾಟ್ಲಿ, ಜಿಲೇಬಿ, ಪೇಡಾ, ಸೋನ್ ಪಾಪ್ಡಿ ಈ ಮುಂತಾದವುಗಳು ಸಾಮಾನ್ಯ ದಿನಗಳಲ್ಲಿಯೂ ಸಿಗುತ್ತವಾದರೂ ದೀಪಾವಳಿಯಲ್ಲಿ ತಯಾರಾಗುವ ಅದೇ ತಿಂಡಿಗಳಿಗೆ ಅದೇನೋ ವಿಶೇಷ ರುಚಿ.
ಬೆಳಕಿನ ಹಬ್ಬದ ವಿಶೇಷವಾಗಿ ತಯಾರಾಗುವ ಹೋಳಿಗೆಗಳ ರುಚಿಯಂತೂ ವರ್ಣನೆಗೆ ನಿಲುಕದ್ದು…! ಬೇಳೆ ಹೋಳಿಗೆ, ಕೊಬ್ಬರಿ ಹೋಳಿಗೆ, ಶೇಂಗಾ ಹೋಳಿಗೆ, ಖರ್ಜೂರದ ಹೋಳಿಗೆ, ಗೆಣಸಿನ ಹೋಳಿಗೆ ಹೀಗೆ ವಿವಿಧ ಹೋಳಿಗೆಗಳು ಸಿಹಿಪ್ರೇಮಿಯನ್ನ ಮತ್ತಷ್ಟು ಅಟ್ರಾಕ್ಟ್ ಮಾಡುತ್ತವೆ. ದೀಪಾವಳಿಯಲ್ಲಿ ಸಿಹಿ ಮೆಲ್ಲುವವರ ಸಂಖ್ಯೆ ದೊಡ್ಡದಿರುವ ಕಾರಣ, ಸಿಹಿತಿಂಡಿ ಅಂಗಡಿಗಳ ಮಾಲೀಕರು ದೀಪಾವಳಿ ಸಮಯದಲ್ಲಿ ವಾರ್ಷಿಕ ಪ್ರಧಾನ ವ್ಯವಹಾರ ನಡೆಸುತ್ತಾರೆ.
ದೀಪಾವಳಿ ಹಬ್ಬಕ್ಕೆ ಮನೆಗೆ ಬರುವ ಎಲ್ಲ ಅತಿಥಿಗಳೂ ಸಿಹಿತಿಂಡಿಗಳೊಂದಿಗೇ ಬಂದಿರುತ್ತಾರೆ. ಮನೆಗೆ ಬಂದ ಅತಿಥಿಗಳಿಗೂ ಸಹ ಸಿಹಿ ನೀಡಿಯೇ ಆದರದ ಸ್ವಾಗತ ನೀಡಲಾಗುತ್ತದೆ. ಇತ್ತೀಚೆಗೆ ಕಾರ್ಪೋರೇಟ್ ಕಚೇರಿಗಳು, ವಿದೇಶಿ ಕಂಪೆನಿಗಳು, ಕಾರ್ಖಾನೆಗಳು, ಬ್ಯಾಂಕ್ಗಳು ಹೀಗೆ ಎಲ್ಲೆಲ್ಲೂ ತಮ್ಮ ತಮ್ಮ ಕೆಲಸಗಾರರಿಗೆ ಸಿಹಿತಿಂಡಿಗಳ ಪೊಟ್ಟಣ ನೀಡಿ ದೀಪಾವಳಿಯ ಶುಭ ಹಾರೈಸಲಾಗುತ್ತಿದೆ.
ದೀಪಗಳ ಹಬ್ಬವಾದ ಈ ದೀಪಾವಳಿ ಭಕ್ತಿಪ್ರದಾನ ಹಬ್ಬವಲ್ಲ ಬದಲಾಗಿ ಜಾನಪದ ನೆಲೆಗಟ್ಟಿನ ಹಬ್ಬ. ವಿನೋದ, ಸಂತೋಷ ಮತ್ತು ಸಂಭ್ರಮದ ಉತ್ಸವ. ನಮ್ಮ ದೇಶದಲ್ಲಂತೂ ಸಿಹಿ ಮೆಲ್ಲುವುದು ಸಂತಸದ ಆಚರಣೆಯ ಅವಶ್ಯಕ ಭಾಗವಾಗಿಬಿಟ್ಟಿದೆ. ಹೀಗಾಗಿ ದೀಪಾವಳಿ ಎಂಬ ಸಂತಸದ ಹಬ್ಬದಲ್ಲಿಯೂ ವಿವಿಧ ರೀತಿಯ ಸಿಹಿತಿಂಡಿಗಳನ್ನು ತಿಂದು ಹಂಚಿ ಖುಷಿಪಡಲಾಗುತ್ತದೆ.
ನಮ್ಮ ದೇಶದಾದ್ಯಂತ ಎಲ್ಲ ಹಿಂದೂಗಳೂ ಆಚರಿಸುವ ಸಂಭ್ರಮದ ಹಬ್ಬವಾಗಿರುವ ದೀಪಾವಳಿಯನ್ನ ಭಾರತದ ಪ್ರತಿಯೊಂದು ಪ್ರದೇಶದಲ್ಲಿಯೂ ತನ್ನದೇ ಆದ ಸಾಂಪ್ರದಾಯಿಕ ನೆಲೆಗಟ್ಟಿನ ಮೇಲೆ ಆಚರಿಸಲಾಗುತ್ತದೆ. ದೀಪಾವಳಿಗಾಗಿಯೇ ವೈವಿಧ್ಯಮಯ ಸಿಹಿತಿನಿಸುಗಳನ್ನು ವಿಶೇಷವಾಗಿ ತಯಾರು ಮಾಡಿ ತಿಂದು ಸಂಭ್ರಮಿಸಲಾಗುತ್ತದೆ. ಸಿಹಿ ತಿನಿಸುಗಳಿಂದ ಪ್ರೀತಿಯ ಒಡನಾಟ ಬೆಸೆಯುವ ಈ ಬೆಳಕಿನ ಹಬ್ಬ ದೀಪಾವಳಿ ಮನುಷ್ಯ ಮನುಷ್ಯರಲ್ಲಿ ಸಂತೋಷವನ್ನು ಮತ್ತು ಸೌಹಾರ್ದವನ್ನು ಹರಡುವ ಮಾರ್ಗವಾಗಿದೆ.