ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಇಂದು ಮಧ್ಯಾಹ್ನ ಹುಬ್ಬಳ್ಳಿ ಉಣಕಲ್ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಆಪ್ತರೇ ಈ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, 5 ವಿಶೇಷ ಪೊಲೀಸ್ ತಂಡವನ್ನು ರಚಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಿವಿಲ್ ಇಂಜಿನಿಯರ್ ಆಗಿದ್ದ ಚಂದ್ರಶೇಖರ ಸರಳ ವಾಸ್ತು ಗುರೂಜಿಯಾಗಿದ್ದೇ ಇಂಟ್ರಸ್ಟಿಂಗ್: ಚಂದ್ರಶೇಖರ್ ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.
ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಎರಡು ಮೂರು ವರ್ಷಗಳಾದರೂ ಸೂಕ್ತ ಉದ್ಯೋಗ ಸಿಗದ ಹಿನ್ನಲೆಯಲ್ಲಿ ಅವರನ್ನು ಅವರ ಅಕ್ಕನ ಗಂಡ ಮುಂಬೈಗೆ ಕರೆದುಕೊಂಡು ಹೋಗಿ ಗುತ್ತಿಗೆದಾರರೊಬ್ಬರ ಬಳಿ ಕೆಲಸಕ್ಕೆ ಸೇರಿಸಿದ್ದರು.
ಅಲ್ಲಿ ಬಹಳಷ್ಟು ವರ್ಷಗಳ ಕಾಲ ಕೆಲಸ ಮಾಡಿದ ಅವರು ಬಳಿಕ ಸಿಂಗಾಪುರಕ್ಕೆ ಹೋಗಿದ್ದು, ಅಲ್ಲಿ ವಾಸ್ತು ಕುರಿತು ಅಧ್ಯಯನ ಮಾಡಿದ್ದರೆನ್ನಲಾಗಿದೆ. ಅಲ್ಲಿಂದ ಬಂದ ಬಳಿಕ ಮುಂಬೈನಲ್ಲಿ ಕಛೇರಿ ತೆರೆದಿದ್ದು, ಆ ನಂತರದಲ್ಲಿ ಹೆಚ್ಚು ಪ್ರಸಿದ್ದಿ ಪಡೆದು ಹುಬ್ಬಳ್ಳಿ, ಬೆಂಗಳೂರಿನಲ್ಲೂ ಕಛೇರಿ ಆರಂಭಿಸಿದ್ದರು.
ನೂರಾರು ಮಂದಿ ಚಂದ್ರಶೇಖರ ಗುರೂಜಿಯವರ ಬಳಿ ಕೆಲಸ ಮಾಡುತ್ತಿದ್ದು, ಈಗ ಅವರ ಸಂಸ್ಥೆಯ ಇಬ್ಬರು ಮಾಜಿ ಉದ್ಯೋಗಿಗಳಿಂದಲೇ ಹತ್ಯೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚಂದ್ರಶೇಖರ ಗುರೂಜಿಯವರ ಮೊದಲ ಪತ್ನಿ ನಿಧನರಾಗಿದ್ದು, ಅವರಿಗೆ ಓರ್ವ ಪುತ್ರಿ ಇದ್ದಾರೆ. ಬಳಿಕ ಅಂಕಿತಾ ಎಂಬವರನ್ನು ಚಂದ್ರಶೇಖರ ಗುರೂಜಿ ಎರಡನೇ ವಿವಾಹವಾಗಿದ್ದು, ಅವರಿಗೆ ಮಕ್ಕಳಿಲ್ಲವೆಂದು ತಿಳಿದುಬಂದಿದೆ.