ಟೆಕ್ನಾಲಜಿಯಲ್ಲಿ ಇಡೀ ದೇಶದಲ್ಲಿರುವ ಮೆಟ್ರೋಸಿಟಿಗಳಿಗಿಂತ ಒಂದು ಹೆಜ್ಜೆ ಮುಂದಿರುವ ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಎನ್ನುವ ಎವಿಜಿಸಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಇಡೀ ಏಷಿಯಾದಲ್ಲೆ ಅತಿದೊಡ್ಡ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಹಾಗೂ ಕಾಮಿಕ್ಸ್ ಸೆಂಟರ್ ಎಂಬ ಕೀರ್ತಿ ಪಡೆದುಕೊಂಡಿದೆ. “ಇನ್ನೋವೇಟ್ ಕರ್ನಾಟಕ” ಎಂಬ ಇನಿಷಿಯೇಟಿವ್ ನ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಸಚಿವಾಲಯ ಈ ಮೀಡಿಯಾ ಹಬ್ ಗೆ ಧನಸಹಾಯ ಮಾಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಈ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿದ್ದಾರೆ.
2012ರಲ್ಲೇ AVGC ನೀತಿಯನ್ನು ಪರಿಚಯಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಈ ಕೇಂದ್ರ ಸ್ಥಾಪಿಸುವ ಮೂಲಕ, ಏಷ್ಯಾದಲ್ಲಿಯೇ ಅತಿ ದೊಡ್ಡದಾದ, ಉತ್ಕೃಷ್ಟ ಎವಿಜಿಸಿ ಕೇಂದ್ರವನ್ನು ಸ್ಥಾಪಿಸಿದ ರಾಜ್ಯ ಎಂಬ ಬಿರುದು ಪಡೆದುಕೊಂಡಿದೆ. ಭಾರತಕ್ಕು ಇದು ಹೆಮ್ಮೆಯ ವಿಷಯವಾಗಿದೆ.
ಸೆಂಟರ್ ಆಫ್ ಎಕ್ಸಲೆನ್ಸ್, ಸೃಜನಶೀಲ ಉದ್ಯಮಗಳಿಗೆ ಡಿಜಿಟಲ್ ಶ್ರೇಷ್ಠತೆಯನ್ನು ತರುತ್ತದೆ. ಭಾರತವು ಈಗ ಜಾಗತಿಕ AVGC ಮಾರುಕಟ್ಟೆಯಲ್ಲಿ ಸುಮಾರು 10 ಪ್ರತಿಶತವನ್ನು ಹೊಂದಿದೆ ಮತ್ತು 2027 ರ ವೇಳೆಗೆ 20-25 ಪ್ರತಿಶತವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. CoE ಸ್ಥಾಪಿಸಿರುವುದರ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಹೆಮ್ಮೆ ಇದೆ. ಇದರಿಂದ ಕರ್ನಾಟಕವು ದೇಶದಲ್ಲಿ AVGC ವಲಯಕ್ಕೆ ಚಾಲನೆ ನೀಡಿದೆ. ಈ ಕೇಂದ್ರದಿಂದ ಈ ವಲಯದಲ್ಲಿ ನಮ್ಮ ದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ.
ವರ್ಚುವಲ್ ರಿಯಾಲಿಟಿ, ಡಿಜಿಟಲ್ ಕಂಪ್ರೆಷನ್, ಫೋಟೋಗ್ರಾಮೆಟ್ರಿ, ಶಿಕ್ಷಣದ ಗೇಮಿಫಿಕೇಶನ್, ರಿಯಲ್ ಟೈಮ್ ವರಚುವಲ್ ಪ್ರೊಡಕ್ಷನ್ ಮತ್ತು ಉದಯೋನ್ಮುಖ ತಂತ್ರಜ್ಞಾನದ ಆಧಾರದ ಮೇಲೆ ವಿಶಿಷ್ಟವಾದ ಕೋರ್ಸ್‌ಗಳನ್ನು ನೀಡುವ ಫಿನಿಶಿಂಗ್ ಸ್ಕೂಲನ್ನು ಸಹ ಕೇಂದ್ರದಲ್ಲಿ ಶುರುಮಾಡಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಒಂದು ವರ್ಷದೊಳಗೆ ರಾಜ್ಯ ಸರ್ಕಾರ ಹೊಸ AVGC ನೀತಿಯನ್ನು ಹೊರತರಲಿದೆ. ಜೊತೆಗೆ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಏರಿಯಾ ಸ್ಥಾಪಿಸಲು ಅಗತ್ಯವಿರುವ ಭೂಮಿಯನ್ನು ಒದಗಿಸಲಾಗುವುದು. ರಾಜ್ಯದಾದ್ಯಂತ ವಿಶೇಷವಾಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹೆಚ್ಚಿನ ಸಣ್ಣ CoE ಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.