ಕೇರಳದ ಸಿಬಿಎಸ್ಇ ಶಾಲಾ ಆಡಳಿತ ಮಂಡಳಿ ಅಸೋಸಿಯೇಷನ್ ಈ ಬಾರಿ ಕೂಡ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ವಯಸ್ಸು ಐದು ವರ್ಷ ಇರಬೇಕು ಎಂದು ಹೇಳಿದೆ. ಸಿಬಿಎಸ್ಇ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯಸ್ಸನ್ನು ಆರು ವರ್ಷಕ್ಕೆ ನಿಗದಿ ಮಾಡಲಾಗಿದೆ ಎಂಬ ವರದಿಯು ಎಲ್ಲೆಡೆ ಹರಿದ ಹಿನ್ನೆಲೆಯಲ್ಲಿ ಸಿಬಿಎಸ್ಇ ಬೋರ್ಡ್ ಈ ಸ್ಪಷ್ಟನೆಯನ್ನು ನೀಡಿದೆ.
ಈ ಹಿಂದೆ ಕೇಂದ್ರೀಯ ವಿದ್ಯಾಲಯ ಸಂಘಟನೆಯು 2022-23ರ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಗುವೇ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಆರು ವರ್ಷ ವಯಸ್ಸಾಗಿರಬೇಕು ಎಂದು ಘೋಷಣೆ ಮಾಡಿತ್ತು. ಐದು ವರ್ಷ ಪ್ರಾಯಕ್ಕೆ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಿಬೇಕೆಂದುಕೊಂಡಿದ್ದ ಪೋಷಕರಿಗೆ ಇದು ಸರಿ ಎನಿಸದ ಹಿನ್ನೆಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಕ್ರಮವನ್ನು ಪ್ರತಿಭಟಿಸಿದ್ದರು. ಅಲ್ಲದೇ ಈ ಸಂಬಂಧ ನ್ಯಾಯಲಯದ ಮೊರೆ ಹೋಗುವ ಸಾಧ್ಯತೆ ಕೂಡ ಇದೆ. ಈ ಬೆನ್ನಲ್ಲೇ ಕೇರಳದ ಹಲವು ಸಿಬಿಎಸ್ಇ ಶಾಲೆಗಳು ಕೂಡ ಈ ಪರಿಷ್ಕೃತ ವಯಸ್ಸನ್ನು ಜಾರಿಗೆ ತರಲಿವೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಪೋಷಕರಿಗೆ ಗೊಂದಲವುಂಟಾಗಿತ್ತು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಭಾಗವಾಗಿ 2022 -23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಾತಿಗೆ ಕನಿಷ್ಟ ವಯಸ್ಸು ಆರು ಎಂದು ಘೋಷಿಸಲಾಗಿದೆ. ಆದರೆ ಕೇರಳ ಸರ್ಕಾರವು ಈ ಸಂಬಂಧ ಇನ್ನೂ ಯಾವುದೇ ಅಧಿಸೂಚನೆಯನ್ನು ಹೊರಡಿಸದ ಕಾರಣ ನಾವು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿಯೂ 1ನೇ ತರಗತಿಗೆ ದಾಖಲಾತಿಗೆ ಮಗುವಿನ ಕನಿಷ್ಟ ವಯಸ್ಸನ್ನು ಐದು ವರ್ಷ ಎಂದೇ ಪರಿಗಣಿಸಲಿದ್ದೇವೆ ಎಂದು ಹೇಳಿದೆ.