ಕೆಲವರಿಗೆ ಸಿನೆಮಾ ನೋಡುವ ಹುಚ್ಚಿರುತ್ತೆ. ಯಾವ ಚಿತ್ರ ಬಿಡುಗಡೆಯಾದ್ರೂ ಅದನ್ನು ನೋಡಬೇಕು ಅನ್ನೋ ಹಂಬಲ. ಆದ್ರೆ ಒಂದೇ ಸಿನೆಮಾವನ್ನು ಹೆಚ್ಚು ಅಂದ್ರೆ ಎರಡು ಬಾರಿ ನೋಡಬಹುದು. ಇಲ್ಲೊಬ್ಬ ಚಿತ್ರಪ್ರೇಮಿ ಒಂದೇ ಚಿತ್ರವನ್ನು 292 ಬಾರಿ ವೀಕ್ಷಿಸಿ ಗಿನ್ನಿಸ್ ದಾಖಲೆ ಮಾಡಿದ್ದಾನೆ.
ವಿಶೇಷ ಅಂದ್ರೆ ಕೇವಲ ಮೂರು ತಿಂಗಳ ಅವಧಿಯಲ್ಲಿ ಈತ ಒಂದೇ ಸಿನೆಮಾವನ್ನು ಇಷ್ಟೊಂದು ಬಾರಿ ವೀಕ್ಷಿಸಿರುವುದು. ಅಮೆರಿಕದ ಫ್ಲೋರಿಡಾ ನಿವಾಸಿ ರಾಮಿರೊ ಅಲಾನಿಸ್ ಎಂಬಾತ ಗಿನ್ನಿಸ್ ದಾಖಲೆ ಮಾಡಿರುವ ವ್ಯಕ್ತಿ, ಈತ 2021ರ ಡಿಸೆಂಬರ್ 16ರಿಂದ 2022ರ ಮಾರ್ಚ್ 15ರೊಳಗೆ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರವನ್ನು 292 ಬಾರಿ ನೋಡಿದ್ದಾನೆ.
ಜನಪ್ರಿಯ ಮಾರ್ವೆಲ್ ಕಾಮಿಕ್ಸ್ ಪಾತ್ರ ಸ್ಪೈಡರ್ ಮ್ಯಾನ್ ಆಧಾರಿತ ಸೂಪರ್ ಹೀರೋ ಚಲನಚಿತ್ರ ಇದು. ಈ ಚಿತ್ರವನ್ನು ಹಲವಾರು ಬಾರಿ ವೀಕ್ಷಿಸಲು ರಾಮಿರೋ 720 ಗಂಟೆಗಳನ್ನು ವ್ಯಯಿಸಿದ್ದಾನೆ. ಅಂದ್ರೆ ಸುಮಾರು 30 ದಿನಗಳು. ಟಿಕೆಟ್‌ಗಾಗಿ ಅಂದಾಜು 2.59 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ರಾಮಿರೊ ಅಲಾನಿಸ್ ಈ ಹಿಂದೆ 2019ರಲ್ಲಿ ‘ಅವೆಂಜರ್ಸ್: ಎಂಡ್‌ಗೇಮ್’ ಅನ್ನು 191 ಬಾರಿ ವೀಕ್ಷಿಸಿ ದಾಖಲೆ ಮಾಡಿದ್ದ.
ಆದ್ರೆ ಈ ದಾಖಲೆಯನ್ನು 2021ರಲ್ಲಿ ಅರ್ನಾಡ್ ಕ್ಲೈನ್ ಅವರು ಮುರಿದಿದ್ದರು, ಆತ ‘ಕಾಮೆಲೋಟ್: ಫಸ್ಟ್ ಇನ್‌ಸ್ಟಾಲ್ಮೆಂಟ್ʼ ಅನ್ನು 204 ಬಾರಿ ವೀಕ್ಷಿಸಿದ್ದರು. ರಾಮಿರೋ ಈಗ ಹೊಸ ದಾಖಲೆ ಮಾಡಿರುವುದು ತಮ್ಮ ಅಜ್ಜಿಯ ಸಲುವಾಗಿ. ಮೊದಲ ಕೆಲವು ವಾರಗಳವರೆಗೆ ರಾಮಿರೋ ಪ್ರತಿದಿನ ಐದು ಸ್ಕ್ರೀನಿಂಗ್‌ಗಳನ್ನು ವೀಕ್ಷಿಸಿದರು, ಅಂದರೆ ದಿನಕ್ಕೆ 12 ಗಂಟೆ 20 ನಿಮಿಷಗಳ ಕಾಲ ಸಿನೆಮಾ ನೋಡುತ್ತಿದ್ದರು. ಆ ಸಮಯದಲ್ಲಿ ಫೋನ್ ಚೆಕ್ ಮಾಡುವಂತಿರಲಿಲ್ಲ, ಬಾತ್‌ರೂಮಿಗೂ ಹೋಗುವಂತಿರಲಿಲ್ಲ. ನಿದ್ದೆ ಕೂಡ ಮಾಡುವುದು ನಿಯಮಕ್ಕೆ ವಿರುದ್ಧ. ಜಾಹೀರಾತು ಸಮೇತ ಸಿನೆಮಾ ನೋಡಿದ್ರೆ ಮಾತ್ರ ಗಿನ್ನಿಸ್ ದಾಖಲೆಗೆ ಅರ್ಹತೆ ಸಿಗುತ್ತದೆ.