ದಕ್ಷಿಣದ ಸೂಪರ್ ಸ್ಟಾರ್, ‘ಪುಷ್ಪ’ ಖ್ಯಾತಿಯ ನಟ ಅಲ್ಲು ಅರ್ಜುನ್ ತೆರೆಮೇಲೆ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಹೀರೋ. ಅಲ್ಲು ಅರ್ಜುನ್‌ರಲ್ಲಿರೋ ಪರೋಪಕಾರದ ಗುಣ ಅವರಿಗೆ ಅಸಲಿ ಹೀರೋನ ಪಟ್ಟವನ್ನು ತಂದುಕೊಟ್ಟಿದೆ. ಕೇರಳದ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣಕ್ಕೆ ಸಹಾಯ ಮಾಡುವ ಮೂಲಕ ಅಲ್ಲು ಅರ್ಜುನ್ ಅಭಿಮಾನಿಗಳ ಮನಗೆದ್ದಿದ್ದಾರೆ.
ಅಲಪ್ಪುಳದ ಕಲೆಕ್ಟರ್, ವಿ.ಆರ್. ಕೃಷ್ಣತೇಜ ಎಂಬುವವರು, ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಸಹಾಯ ಮಾಡಿರುವ ನಟ ಅಲ್ಲು ಅರ್ಜುನ್ ಬಗ್ಗೆ ಫೇಸ್ಬುಕ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. 12ನೇ ತರಗತಿಯಲ್ಲಿ ಆ ವಿದ್ಯಾರ್ಥಿನಿ ಶೇ.92 ಅಂಕ ಗಳಿಸಿದ್ದಳು. ಆದರೆ ತಂದೆ ಕೋವಿಡ್‌ನಿಂದ ಮೃತಪಟ್ಟಿದ್ದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆಕೆಗೆ ಓದು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ನರ್ಸ್ ಆಗಬೇಕು ಎಂಬುದು ಅವಳ ಬಯಕೆ.
ಇದನ್ನರಿತ ಕಲೆಕ್ಟರ್ ಆಕೆಯನ್ನು ಖಾಸಗಿ ಕಾಲೇಜಿಗೆ ಸೇರಿಸಿದ್ದಾರೆ. ಶುಲ್ಕ ಭರಿಸಲು ಅಲ್ಲು ಅರ್ಜುನ್ ಬಳಿ ಸಹಾಯ ಕೇಳಿದ್ದಾರೆ. ವಿಷಯ ಅರಿತ ಅಲ್ಲು ಅರ್ಜುನ್ ವಿದ್ಯಾರ್ಥಿನಿಗೆ ಕಾಲೇಜು ಶುಲ್ಕವನ್ನು ನೀಡುವುದಾಗಿ ಭರವಸೆ ನೀಡಿದ್ರು. ಸಂಪೂರ್ಣ ನಾಲ್ಕು ವರ್ಷಗಳ ಕೋರ್ಸ್‌ಗೆ ಬೇಕಾದ ಹಣ ಹಾಗೂ ಹಾಸ್ಟೆಲ್ ಖರ್ಚನ್ನು ಸಹ ಭರಿಸುವುದಾಗಿ ಅಲ್ಲು ಅರ್ಜುನ್ ಭರವಸೆ ಕೊಟ್ಟಿದ್ದಾರೆ. ಈ ವಿಚಾರವನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿರುವ ಕಲೆಕ್ಟರ್ ಸಾಹೇಬರು, ಅಲ್ಲು ಅರ್ಜುನ್ ಅವರಿಗೆ ಧನ್ಯವಾದ ಹೇಳಿದ್ದಾರೆ. ನಟನ ಈ ಔದಾರ್ಯ ಅಭಿಮಾನಿಗಳಿಗೂ ಇಷ್ಟವಾಗಿದೆ.