ಇಂದೋರ್: ಪರೀಕ್ಷೆಯ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಅನೇಕ ನಿದರ್ಶನಗಳಿವೆ. ಇತ್ತೀಚೆಗಿನ ತಂತ್ರಜ್ಞಾನ ವ್ಯವಸ್ಥೆ ಕೂಡ ನಕಲು ಮಾಡಲು ಸುಲಭ ದಾರಿ ಮಾಡಿಕೊಟ್ಟಿದೆ. ಅದೇ ರೀತಿ ಒಂದು ವೇಳೆ ನೀವು ಮುನ್ನಾಭಾಯ್ ಎಂಬಿಬಿಎಸ್ ಚಲನಚಿತ್ರ ವೀಕ್ಷಿಸಿದ್ದರೆ, ಅದರಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಮುಖಾಂತರ ಯಾವ ರೀತಿ ಪರೀಕ್ಷೆಯಲ್ಲಿ ನಕಲು ಮಾಡಿದ್ದಾರೆ ಎಂಬ ಬಗ್ಗೆ ತಿಳಿದಿರುತ್ತದೆ. ಇದೀಗ ಇಲ್ಲೊಂದೆಡೆ ಇದೇ ರೀತಿಯ ಘಟನೆ ನಡೆದಿದೆ.
ಹೌದು, ಮಧ್ಯಪ್ರದೇಶದ ಇಂದೋರ್ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆಂದೇ, ತಮ್ಮ ಕಿವಿಯಲ್ಲಿ ಸೂಕ್ಷ್ಮ ಗಾತ್ರದ ಬ್ಲೂಟೂತ್ ಸಾಧನಗಳನ್ನು ಶಸ್ತ್ರಚಿಕಿತ್ಸೆಯಿಂದ ಅಳವಡಿಸಿಕೊಂಡಿದ್ದಾರೆ.
ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ನ ಕೊನೆಯ ವರ್ಷದ ಪರೀಕ್ಷೆಗೆ ಹಾಜರಾದ ಇಬ್ಬರನ್ನು ಸ್ಕ್ವಾಡ್ ತಂಡ ಪತ್ತೆಹಚ್ಚಿದೆ. ವಿದ್ಯಾರ್ಥಿಗಳಿಬ್ಬರು ಸಿಮ್ ಹೊಂದಿರುವ ಸಣ್ಣ ಸಾಧನವನ್ನು ಮರೆಮಾಡಿದ್ದರು. ಅದನ್ನು ಮೊಬೈಲ್ ಫೋನ್ನಂತೆ ಬಳಸಲಾಗುತ್ತಿತ್ತು. ಯಾರೂ ಗಮನಿಸದ ಅಥವಾ ನೋಡಲು ಸಾಧ್ಯವಾಗದ ರೀತಿಯಲ್ಲಿ ನಕಲು ಮಾಡಲು ತಮ್ಮ ಕಿವಿಯಲ್ಲಿ ಬ್ಲೂಟೂತ್ ಚಾಲಿತ ಮೈಕ್ರೊಫೋನ್ಗಳನ್ನು ಇರಿಸಿದ್ದರು.
ಇಬ್ಬರೂ ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎವಿವಿ ಉಪಕುಲಪತಿ ರೇಣು ಜೈನ್ ತಿಳಿಸಿದ್ದಾರೆ.