ನವದೆಹಲಿ: ಬಾಲಿವುಡ್ ನಟಿ ಕಂಗಾನಾ ರಣಾವತ್ ಸದಾ ಕಾಲ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇದೀಗ ಬಿಜೆಪಿ ನಾಯಕ ಮಯಾಂಕ್ ಮಧುರ್, ಕಂಗನಾ ವಿರುದ್ಧ ಆರೋಪ ಮಾಡಿದ್ದು, ತನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
‘ತೇಜಸ್’ ಹೆಸರಿನ ಸಿನಿಮಾದಲ್ಲಿ ಕಂಗನಾ ನಟಿಸುತ್ತಿದ್ದು, ಪೈಲಟ್ ತೇಜಸ್ ಗಿಲ್ ಅವರ ಜೀವನಾಧಾರಿತ ಕಥೆಯುಳ್ಳ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಕಂಗನಾ ಬಿಜೆಪಿ ನಾಯಕನಿಗೆ ಮೋಸ ಮಾಡಿದ್ದಾರಂತೆ. ಈ ಬಗ್ಗೆ ಬಿಜೆಪಿ ನಾಯಕ ಮಯಾಂಕ್ ಮಧುರ್ ಸಂದರ್ಶನವೊಂದರಲ್ಲಿ ಹೇಳಿದ್ದು, ಕಾನೂನು ಹೋರಾಟಕ್ಕೂ ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ?
ತೇಜಸ್ ಸಿನಿಮಾ ಚಿತ್ರೀಕರಣ ಅನುಮತಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿಸುವಂತೆ ಬಿಜೆಪಿ ನಾಯಕ ಮಯಾಂಕ್ ಅವರಿಗೆ ಕಂಗನಾ ಕೇಳಿದ್ದರಂತೆ. ರಾಜನಾಥ್ ಸಿಂಗ್ ಭೇಟಿ ಮಾಡಿಸಿದರೆ ನಿಮಗೆ 15 ನಿಮಿಷಗಳ ಕಾಲ ಸಿನಿಮಾದಲ್ಲಿ ತೆರೆ ಮೇಲೆ ಬರುವ ಪಾತ್ರ ಕೊಡಿಸುವುದಾಗಿ ಹೇಳಿದ್ದರಂತೆ. ಮಯಾಂಕ್ ರಕ್ಷಣಾ ಸಚಿವರ ಭೇಟಿಗೆ ವ್ಯವಸ್ಥೆ ಮಾಡಿಸಿದ್ದು, ಅದರಂತೆ ಕಂಗನಾ ಹಾಗೂ ಟೀಂ ರಕ್ಷಣಾ ಸಚಿವರನ್ನು ಭೇಟಿಯಾಗಿದೆ.
ಭೇಟಿಯಾದ ಬಳಿಕ ಕಂಗನಾ ಮಾತಿಗೆ ತಪ್ಪಿದ್ದು, ಮಯಾಂಕ್ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿಲ್ಲ. ಇದೇ ವಿಚಾರವಾಗಿ ಬೇಸರ ವ್ಯಕ್ತಪಡಿಸಿರುವ ಮಯಾಂಕ್, ಕಂಗನಾರನ್ನು ಮಗಳಂತೆ ನೋಡುತ್ತಿದ್ದೆ. ಅವರು ಸಿನಿಮಾದಲ್ಲಿ ಪಾತ್ರ ಕೊಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅವರು ಮೋಸ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ಮೊರೆ ಹೋಗಲು ಸಾಧ್ಯವೇ ಎಂಬುದನ್ನು ಯೋಚಿಸುತ್ತೇನೆ ಎಂದು ಹೇಳಿದ್ದಾರೆ.