ನವರಾತ್ರಿಯಂದು ದುರ್ಗೆಯ ಒಂದೊಂದು ಅವತಾರವನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಇಂದು ನವರಾತ್ರಿಯ ಕೊನೆಯ ದಿನ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆಯು ಅರ್ಧನಾರೀಶ್ವರ ರೂಪದಲ್ಲಿ ಇರುತ್ತಾಳೆ, ಸಿದ್ಧಿದಾತ್ರಿ ದೇವಿಯು ಎಲ್ಲಾ ಬಗೆಯ ಸಿದ್ಧಿಯನ್ನು ಭಕ್ತರಿಗೆ ಕರುಣಿಸಿ ಕಾಪಾಡುವವಳು ಎಂಬ ನಂಬಿಕೆ ಇದೆ.
ಚತುರ್ಭಜವನ್ನು ಹೊಂದಿರುವ ಸಿದ್ಧಿದಾತ್ರಿ ದೇವಿಯು ಕೈಗಳಲ್ಲಿ ಶಂಕ, ಚಕ್ರ, ಗಧೆ, ಕಮಲವನ್ನು ಹಿಡಿದಿರುತ್ತಾಳೆ. ತನ್ನನ್ನು ಆರಾಧಿಸುವ ಭಕ್ತಿರಿಗೆ ಈ ತಾಯಿಯು ಸಕಲವನ್ನು ಕರುಣಿಸಿ ಕಾಪಾಡುತ್ತಾಳೆ. ಹಾಗೇ ಇಂದು ಆಯುಧ ಪೂಜೆ ಆಗಿರುವುದರಿಂದ ಮನೆಯಲ್ಲಿರುವ ವಾಹನ, ಯಂತ್ರೋಪಕರಣಗಳನ್ನು ಪೂಜಿಸಲಾಗುತ್ತದೆ.
ಗುಲಾಬಿ ಅಥವಾ ಹಸಿರು ಬಣ್ಣದ ಬಟ್ಟೆಯನ್ನು ಧರಿಸಿ ತಾಯಿಗೆ ಪೂಜೆ ಮಾಡಿದರೆ ಒಳಿತಾಗುವುದು ಹಾಗೇ ನೈವೇದ್ಯಕ್ಕೆ ಸಕ್ಕರೆಯಿಂದ ಮಾಡಿದ ತಿನಿಸನ್ನು ಇಡಬೇಕು. ತಾಯಿಗೆ ತಾವರೆ ಹೂ ಎಂದರೆ ಪ್ರೀತಿ. ಹಾಗಾಗಿ ಈ ಹೂವಿನ ಅಲಂಕಾರ ಮಾಡಿದರೆ ತಾಯಿಯ ಅನುಗ್ರಹ ನಿಮಗೆ ಸಿಗುತ್ತದೆ.