ಬೆಂಗಳೂರು: ಪ್ರವಾಹ ಬಂದಾಗ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ನೀಡದ ಪ್ರಧಾನಿ ಮೋದಿ, ಈಗ ಯೋಗ ಮಾಡಲು ರಾಜ್ಯಕ್ಕೆ ಬಂದಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ದೇಶ ಕೊರೊನಾ ಸೋಂಕನ್ನು ಯಶಸ್ವಿಯಾಗಿ ಎದುರಿಸಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಕೋವಿಡ್ ಅನ್ನು ಇಡೀ ದೇಶದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರೆ ಅದಕ್ಕೆ ಪ್ರಧಾನಿ ಮೋದಿ ಕಾರಣ. ಕೋವಿಡ್ ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ನೀಡಲಾಗಿದೆ ಎಂದರು.
ರಾಜ್ಯಕ್ಕೆ ಸಾವಿರಾರು ಕೋಟಿ ರೂ.ಗಳಷ್ಟು ಔಷಧ, ಲಸಿಕೆ, ಉಪಕರಣಗಳು, ಆಕ್ಸಿಜನ್, ವೆಂಟಿಲೇಟರ್ ಗಳನ್ನು ಕೇಂದ್ರ ಸರ್ಕಾರ ಕಳುಹಿಸಿದೆ. ಹೀಗಿರುವಾಗ ಸುಮ್ಮನೇ ರಾಜಕೀಯವಾಗಿ ಆರೋಪ ಮಾಡಬೇಕು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಹೇಳಿಕೆಗಳನ್ನು ಕೊಟ್ಟ ಮಾತ್ರಕ್ಕೆ ಅದಕ್ಕೆ ಅರ್ಥವಿರಲ್ಲ. ಸತ್ಯಾಂಶ ಏನೆಂಬುದು ಜನರಿಗೆ ಗೊತ್ತು. ಪ್ರಧಾನಿ ಮೋದಿ ರಾಜ್ಯಕ್ಕೆ ಮಾಡಿರುವ ಸಹಾಯದ ಬಗ್ಗೆಯೂ ಜನರಿಗೆ ಗೊತ್ತಿದೆ ಎಂದು ಹೇಳಿದರು.