ಬಾಗಲಕೋಟೆ : ಪ್ರವಾಹ, ಕೊರೊನಾದಂತಹ ಸಂಕಷ್ಟಗಳಿಲ್ಲದಿದ್ದರೂ ಕಾಂಗ್ರೆಸ್ ನಿಂದ ಅಭಿವೃದ್ಧಿ ಕಾರ್ಯ ಮಾಡಲು ಆಗಿರಲಿಲ್ಲ. ಹೀಗಾಗಿಯೇ ಜನರು ಆ ಪಕ್ಷವನ್ನು ಹೀನಾಯವಾಗಿ ಸೋಲಿಸಿದರು ಎಂದು ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡುವುದಿಲ್ಲ ಎಂದೇ ಜನರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದಾರೆ ಎಂಬುವುದನ್ನು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲದಂತಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ನಲ್ಲಿ ಸದ್ಯ ಮೂರು ಗುಂಪುಗಳಿವೆ. ಈ ಗುಂಪುಗಳಲ್ಲಿದ್ದ ಎಲ್ಲರೂ ಅಧಿಕಾರಕ್ಕಾಗಿ ಒಳಗೊಳಗೆ ಕತ್ತಿ ಮಸಿಯುತ್ತಲೇ ಇರುತ್ತಾರೆ. ಸಿದ್ದರಾಮಯ್ಯರದ್ದು ಒಂದು ಗುಂಪು, ಡಿಕೆಶಿ ಅವರದ್ದು ಇನ್ನೊಂದು ಗುಂಪಾದರೆ, ಶಾಮನೂರು ಶಿವಶಂಕರಪ್ಪ, ಖರ್ಗೆ, ಪರಮೇಶ್ವರ್ ಅವರದ್ದು ಮೂರನೇ ಗುಂಪು. ಇವರೆಲ್ಲ ಅಧಿಕಾರಕ್ಕಾಗಿಯೇ ಕಿತ್ತಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಯಾವಾಗಲೂ ಒಂದಾಗುವುದಿಲ್ಲ. ಅವರಿಬ್ಬರೂ ನೀರು ಹಾಗೂ ಎಣ್ಣೆ ಇದ್ದಂತೆ. ಅವರೆಡೂ ಎಂದಿಗೂ ಒಂದಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.