ಸಿದ್ದರಾಮಯ್ಯನವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಅದ್ದೂರಿ ಸಿದ್ದತೆ ನಡೆದಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 5 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಇವರುಗಳೆಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ಪಲಾವ್, ಮೊಸರನ್ನ ಮತ್ತು ಸಿಹಿ ತಿಂಡಿ ಸಿದ್ಧಪಡಿಸಲಾಗುತ್ತದೆ ಎನ್ನಲಾಗಿದ್ದು, ಜೊತೆಗೆ ಮಳೆ ಬಂದರೆ ಯಾವುದೇ ಸಮಸ್ಯೆಯಾಗದಂತೆ ಪೆಂಡಾಲ್ ಹಾಕಲಾಗುತ್ತದೆ.
ಕಾರ್ಯಕ್ರಮದ ಹಿಂದಿನ ದಿನ ಅಂದರೆ ಆಗಸ್ಟ್ 2ರಂದು ಲೇಸರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆಗಸ್ಟ್ 3ರಂದು ಬೆಳಗ್ಗೆ 10 ಗಂಟೆಗೆ ‘ಸಿದ್ದರಾಮಯ್ಯ – 75 ಅಮೃತ ಮಹೋತ್ಸವ’ ಕಾರ್ಯಕ್ರಮ ಆರಂಭವಾಗಲಿದೆ.
ಮೊದಲಿಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 12 ಗಂಟೆಯಿಂದ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ಹೆಲಿಪ್ಯಾಡ್ ಗಳನ್ನು ಸಿದ್ಧಪಡಿಸಲಾಗಿದೆ.