ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯುರಪ್ಪ ಮಾಡುತ್ತಿರುವುದು ಹೊಸ ನಾಟಕ. ರೇಣುಕಾಚಾರ್ಯನನ್ನು ಮುಂದೆ ಬಿಟ್ಟು ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಬಿ ಎಸ್ ವೈ ಆಡಳಿತ ಸಂಪೂರ್ಣ ವಿಫಲವಾಗಿದೆ. ಇದು ಹೈಕಮಾಂಡ್ ಗಮನಕ್ಕೂ ಬಂದಿದೆ. ಈಗ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಹೊಸ ನಾಟಕವಾಡಿ ತಾನು ಪ್ರಾಮಾಣಿಕ ಎಂಬ ರೀತಿ ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಬಿ ಎಸ್ ವೈ ಓರ್ವ ಕೆಟ್ಟ ಸಿಎಂ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಯತ್ನ ಬಹಳ ಹಿಂದಿನಿಂದ ನಡೆಯುತ್ತಿದೆ. ಆದರೆ ಅಧಿಕಾರ ಉಳಿಸಿಕೊಳ್ಳಲು ಹೈಕಮಾಂಡ್ ಮನವೊಲಿಸಲು ನೋಡುತ್ತಿದ್ದಾರೆ. ಹೀಗಾಗಿ ರೇಣುಕಾಚಾರ್ಯನನ್ನು ಮುಂದೆ ಬಿಟ್ಟಿದ್ದಾರೆ ಎಂದರು.
ಇನ್ನು ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಇಬ್ಬರೂ ಅಧಿಕಾರಿಗಳನ್ನು ಎತ್ತಿ ಕಟ್ಟುವ ಕೆಲಸಮಾಡಿ ಗಲಾಟೆ ತಂದಿಟ್ಟಿದ್ದಾರೆ. ಅದೆಂಥದ್ದೋ ಸಿಂಹ ಇದೆಯಲ್ಲ ಅದೇ ತಂದಿಟ್ಟಿದ್ದು. ಅಧಿಕಾರಿಗಳಿಗೆ ಪವರ್ ಕೊಟ್ಟಿದ್ದು ಯಾರು? ಆಗಲೇ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅಧಿಕಾರಿಗಳು ಕಿತ್ತಾಟ ನಡೆಸಿದ್ದರೆ ಸಚಿವರು, ಶಾಸಕರು, ಸಂಸದರು ತಮಗೆ ಬೇಕಾದ ಹೇಳಿಕೆ ನೀಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಬದಲಿಗೆ ಶಿಲ್ಪಾ ನಾಗ್ ಅವರನ್ನು ಡಿಸಿ ಮಾಡಲು ಯತ್ನಿಸಿದ್ದರು ಎಂದು ಹೇಳಿದರು.