ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸಮ್ಮಿಶ್ರ ಸರ್ಕಾರ ಉರುಳಿದ ತಕ್ಷಣ ಇವರ ಇಮೇಜ್ ಠುಸ್ ಆಯ್ತಂತೆ. ಇವರಿಗೆ ಯಾವ ಇಮೇಜ್ ಇತ್ತು ಹಾಳಾಗೋಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಕಾಂಗ್ರೆಸ್ ಜೊತೆ ಕೈಜೋಡಿಸಿ ತಮ್ಮ ಇಮೇಜ್ ಹಾಳಾಯ್ತು, ಸಿದ್ದರಾಮಯ್ಯ ಅಪಪ್ರಚಾರ ಮಾಡಿದರು ಎಂದು ಆರೋಪಿಸಿದ್ದಾರೆ. ಇವರ ಇಮೇಜ್ ಇದ್ದಿದ್ದರೆ 110 ಸ್ಥಾನ ಗೆಲ್ಲಬೇಕಿತ್ತು. ನಾನು ಡಿಸಿಎಂ ಆಗಿದ್ದಾಗ 59 ಸ್ಥಾನ ಗೆದ್ದಿದ್ದೆವು. ನನ್ನ ಜೆಡಿಎಸ್ ನಿಂದ ಹೊರ ಹಾಕಿದ ಬಳಿಕ 28 ಸ್ಥಾನ ಗೆದ್ದರು. ಬಿಜೆಪಿ ಜೊತೆ ಹೋಗಿದ್ದರೆ ಸಿಎಂ ಆಗಿರುತ್ತಿದ್ದೆ ಎಂದು ಹೇಳುತ್ತಿದ್ದಾರೆ. ಅಂದ ಮೇಲೆ ಇವರು ಬಿಜೆಪಿಯ ಬಿ ಟೀಂ ಎಂದಾಯಿತಲ್ಲ ಎಂದು ಗುಡುಗಿದ್ದಾರೆ.
ಇದೇ ವೇಳೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ, ದೇವೇಗೌಡರು ಸೆಕ್ಯುಲರಾ? ಕಮ್ಯುನಲ್ಲಾ? ಎಂಬುದು ಗೊತ್ತಾಗಬೇಕು. ಜೆಡಿಎಸ್ ಬೆಂಬಲದಿಂದ ಬಿಜೆಪಿ ಅವಿಶ್ವಾಸದ ನೋಟೀಸ್ ನೀಡಿದೆ. ಜೆಡಿಎಸ್ ಜ್ಯಾತ್ಯತೀತ ಎಂದು ಹೇಳಿಕೊಳ್ಳುತ್ತಾರಲ್ಲ, ಅಂದ ಮೇಲೆ, ನಮಗೂ ಬೆಂಬಲ ನೀಡಬೇಕು. ಜನರಿಗೆ ಗೊತ್ತಾಗಲಿ ಜೆಡಿಎಸ್ ಸೆಕ್ಯುಲರಾ? ಅಥವಾ ಕೋಮುವಾದಿನಾ? ಎಂಬುದು ಎಂದು ಹೇಳಿದ್ದಾರೆ.