ಹಾವೇರಿ: ಕೋಲಾರದಿಂದ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದು, ಸಿದ್ದರಾಮಯ್ಯಗೆ ಕೋಲಾರಕ್ಕಿಂತ ಪಾಕಿಸ್ತಾನವೇ ಸೇಫ್ ಎಂದು ಹೇಳಿದ್ದಾರೆ.
ಹಾವೇರಿಯ ರಾಣೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ನನ್ನ ಲೆಕ್ಕಚಾರದ ಪ್ರಕಾರ ಸಿದ್ದರಾಮಯ್ಯನವರಿಗೆ ಸೇಫ್ ಅಂದ್ರೆ ಪಾಕಿಸ್ತಾನ. ಸಿದ್ದರಾಮಯ್ಯನವರ ಮನ:ಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ತಾನ. ಅಲ್ಲಿ ಮೋದಿ, ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ಇಲ್ಲ. ಅಲ್ಲಿಗೆ ಹೋದರೆ ಕಾಟ ಕೊಡಲು ಡಿಕೆಶಿ, ಖರ್ಗೆ ಕೂಡ ಇರುವುದಿಲ್ಲ. ಹಾಗಾಗಿ ಪಾಕಿಸ್ತಾನವೇ ಸಿದ್ದರಾಮಯ್ಯನವರಿಗೆ ಸೇಫ್ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಬಗ್ಗೆಯೂ ಟೀಕಿಸಿದ ಸಿ.ಟಿ.ರವಿ, ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ. ನಾವು ಚಿಕ್ಕಮಗಳೂರು ಉತ್ಸವ ಮಾಡಿದೆವು. ಸ್ವಯಂಪ್ರೇರಿತವಾಗಿಯೇ ಚಿಕ್ಕಮಗಳೂರು ಉತ್ಸವಕ್ಕೆ ಜನ ಬಂದಿದ್ದರು. ಇದು ಜನರ ತಾಕತ್ತು. ರಾತ್ರಿವರೆಗೂ ಜನ ಕಾರ್ಯಕ್ರಮ ನೋಡಿದರು. 6-7 ಸಾವಿರ ಜನರನ್ನು ಸೇರಿಸಿದರೆ ಪ್ರಜಾಧ್ವನಿಯಾಗಲ್ಲ. ಜನ ನಮ್ಮ ಜೊತೆ ಇರುವುದಕ್ಕೇ ಕಾಂಗ್ರೆಸ್ ನವರಿಗೆ ಭಯವಿದೆ ಎಂದು ಹೇಳಿದರು.