
ಗುರುವಾರದಂದು ಸಿದ್ದರಾಮಯ್ಯನವರ ಸ್ವ ಕ್ಷೇತ್ರ ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ ಪ್ರಚಾರ ರಥಯಾತ್ರೆ ತೆರಳುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಬಿಜೆಪಿ ಕಾರ್ಯಕರ್ತ ನಾಗೇಶ್ ಅವರಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಅಲ್ಲದೆ ಈ ಸಂಬಂಧ ಸಿದ್ದರಾಮಯ್ಯನವರ ಅಣ್ಣನ ಮಕ್ಕಳ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬಿಜೆಪಿ ನಾಯಕರು ಸಿದ್ದರಾಮಯ್ಯನವರ ವಿರುದ್ಧ ಮುಗಿಬಿದ್ದಿದ್ದಾರೆ. ಗೂಂಡಾಗಿರಿ ಮಾಡಿಸುವ ಮೂಲಕ ಸಿದ್ದರಾಮಯ್ಯ ಗೆಲ್ಲಲು ಹೊರಟಿದ್ದಾರೆ ಎಂದು ಗುಡುಗಿದ್ದಾರೆ.
ಇದರ ಮಧ್ಯ ಘಟನೆ ಕುರಿತಂತೆ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಕಾರು – ಬೈಕ್ ಡಿಕ್ಕಿ ಆದ ಕಾರಣಕ್ಕೆ ಈ ಜಗಳ ನಡೆದಿದೆ. ರಾಜಕೀಯ ದುರುದ್ದೇಶಕ್ಕಾಗಿ ಇದು ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಾಟೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿದ್ದರಾಮನ ಹುಂಡಿಯಲ್ಲಿ ನಡೆದ ಈ ಜಗಳ ನಮ್ಮ ಕುಟುಂಬದವರ ಮನೆ ಸಮೀಪ ನಡೆದಿದ್ದು, ಇದರಲ್ಲಿ ಅವರ್ಯಾರು ಭಾಗಿಯಾಗಿಲ್ಲ. ಆದರೂ ಕೂಡ ಸುಳ್ಳು ದೂರು ದಾಖಲಿಸಲಾಗಿದೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಆದರೆ ಜನ ಇದನ್ನು ನಂಬುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.