ಮಳೆಗಾಲದ ಆರಂಭವೇ ಘನಘೋರವಾಗಿರುತ್ತೆ. ಒಮ್ಮಿಂದೊಮ್ಮೆ ಅಬ್ಬರಿಸಿ ಬೊಬ್ಬರಿಯುವ ಮಳೆಯಿಂದಾಗಿ ಜಲಪ್ರಳಯವೇ ಸೃಷ್ಟಿಯಾಗುತ್ತದೆ. ಈಗಾಗಲೇ ಸುರಿಯುತ್ತಿರೋ ಮಳೆಗೆ ಅಸ್ಸಾಂ ಭಾಗಶಃ ಜಲಾವೃತವಾಗಿದೆ. ಇನ್ನು ಬಿಹಾರ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಗುಡುಗು ಸಿಡಿಲು ಬಡಿದು 17 ಜನ ಸಾವನ್ನಪ್ಪಿದ್ದಾರೆ. ಬಾಗಲ್ಪುರ ಜಿಲ್ಲೆಯಲ್ಲಿ ಆರು ಜನ, ವೈಶಾಲಿಯಲ್ಲಿ ಮೂರು ಜನ ಮತ್ತು ಬಂಕಾ ಹಾಗೂ ಖಗರಿಯಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಮಾಧೇಪುರ, ಸಹರ್ಸಾ, ಮುಂಗೇರ್ ಮತ್ತು ಕತಿಹಾರ್‌ನಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿರೋದು ವರದಿಯಾಗಿದೆ. ಸದ್ಯಕ್ಕೆ ಬಿಹಾರ ಸರ್ಕಾರ ಸಂತ್ರಸ್ತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಿಸಿದೆ.
ಮಳೆ, ಗುಡುಗು, ಸಿಡಿಲು ಅಂತ ನಿರ್ಲಕ್ಷಿಸೋ ಹಾಗೆಯೇ ಇಲ್ಲ….. ಕ್ಷಣ ಮಾತ್ರದಲ್ಲಿ ಮಿಂಚಿ ಮಾಯವಾಗೋ ಸಿಡಿಲು, ನೋಡ ನೋಡುತ್ತಲೇ ಅದೆಷ್ಟೊ ಜನರನ್ನ ಸುಟ್ಟು ಹಾಕಿರುತ್ತೆ. ಅಷ್ಟಕ್ಕೂ ಈ ಮಿಂಚು ಹೊಡೆಯಲು ಕಾರಣ ಏನು? ಅದರಿಂದ ಸುರಕ್ಷಿತವಾಗಿರಬೇಕೆಂದರೆ ಏನು ಮಾಡಬೇಕು?
ಅಸಲಿಗೆ ಎಲ್ಲ ಮೋಡಗಳು ಗುಡುಗು ಸಿಡಿಲನ್ನ ಸೃಷ್ಟಿ ಮಾಡುವುದಿಲ್ಲ. ಮಳೆಗಾಲದಲ್ಲಿ ನೀರಿನ ಅಂಶ ಮತ್ತು ವಿದ್ಯುತ್ ಅಂಶಗಳನ್ನ ಹೊಂದಿರುವ ಮೋಡಗಳು ಮಾತ್ರ ಸಿಡಿಲು ಹಾಗೂ ಗುಡುಗನ್ನ ಉಂಟು ಮಾಡುತ್ತವೆ. ಧನಾತ್ಮಕ ಹಾಗೂ ಋಣಾತ್ಮಕ ವಿದ್ಯುತ್ ಅಂಶಗಳಿರುವ ಮೋಡಗಳು ಬೇರೆ ಬೇರೆಯಾಗಿರುತ್ತವೆ. ಇವೆರಡೂ ಪರಸ್ಪರ ವಿರುದ್ಧವಿರುವ ಮೋಡಗಳಾಗಿದ್ದು ತುಂಬಾ ಹತ್ತಿರ ಬಂದಾಗ ಋಣ ವಿದ್ಯುತ್ ಅಂಶಗಳು ಒಮ್ಮೆಲೆ ಧನಾತ್ಮಕ ಅಂಶಗಳಿರುವ ಮೋಡದ ಕಡೆಗೆ ಅಪ್ಪಳಿಸುತ್ತವೆ.
ಅಪಾರ ವಿದ್ಯುತ್ ಅಂಶಗಳು ಒಂದು ಮೋಡದಿಂದ ಇನ್ನೊಂದು ಮೋಡಕ್ಕೆ ಜಿಗಿದಾಗ ಬೆಳ್ಳಿಯಂಥ ಪ್ರಖರ ಗೆರೆಗಳು ಮಿಂಚಿ ಮಾಯವಾಗುತ್ತವೆ ಇದೇ ಮಿಂಚಾಗಿರುತ್ತದೆ. ಮಿಂಚಿನ ಪ್ರಕಾಶ ಮತ್ತು ಅದರ ಶಬ್ದ ಕೇಳಿಸುವುದು, ಇವುಗಳಲ್ಲಿ 30 ಸೆಕೆಂಡುಗಳಿಗಿಂತ ಕಡಿಮೆ ಅಂತರವಿದ್ದರೆ, ಆ ಮಿಂಚು ಅಪಾಯಕಾರಿಯಾಗಿದೆ ಎಂದು ಅಂದುಕೊಳ್ಳಬಹುದು.
ಇನ್ನು ಗುಡುಗು, ಇದು ಮಿಂಚಿನ ಬೆಳಕು ಮೋಡಗಳಿಂದ ಭೂಮಿಗೂ ಹರಿಯುತ್ತದೆ. ಈ ಎರಡು ಮೋಡಗಳ ಮಧ್ಯೆಯೇ ಇರುವ ಗಾಳಿ, ಈ ವಿದ್ಯುತ್ ಆಘಾತದಿಂದ ಒಮ್ಮಗೆ ಕಾದು ಸಿಡಿಯುತ್ತದೆ. ಆಗ ದೊಡ್ಡದಾದ ಶಬ್ದ ಉಂಟಾಗುತ್ತದೆ. ಇದನ್ನು ಗುಡುಗು ಅನ್ನಬಹುದು.
ಮಿಂಚು ನೋಡಲು ಆಕರ್ಷಣೀಯ ಎಂದನ್ನಿಸಿದರೂ ಮಿಂಚಿನ ಹೊಡೆತದಿಂದ ಪ್ರತಿವರ್ಷ ವಿಶ್ವದಾದ್ಯಂತ ಸರಿಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಾರೆ. ನೂರಾರು ಜನರು ಬದುಕುಳಿದರೂ ಅವರು ಕೆಲವೊಂದು ವಿಲಕ್ಷಣ ರೋಗಗಳಿಗೆ ಗುರಿಯಾಗಿರುತ್ತಾರೆ. ನೆನಪಿನ ಶಕ್ತಿ ಕಳೆದುಕೊಳ್ಳುವುದು, ಪದೇ-ಪದೇ ತಲೆ ತಿರುಗುವುದು, ಸುಸ್ತು, ಮರಗಟ್ಟುವಿಕೆ ಹಾಗೂ ಇತರ ಸುದೀರ್ಘ ಕಾಲದ ರೋಗಗಳಿಂದ ಬಳಲುತ್ತಿರುತ್ತಾರೆ. ಮಿಂಚಿನ ವಿಪರೀತ ಶಾಖವು ಮರಗೊಳಗಿನ ನೀರನ್ನ ಆವಿಯಾಗಿಸುತ್ತದೆ ಮತ್ತು ಸಂಪೂರ್ಣ ಮರವನ್ನೇ ಉರಿಸಿ ಬೂದಿ ಮಾಡಿ ಬಿಟ್ಟಿರುತ್ತೆ.
ಇನ್ನೂ ಈ ಮಿಂಚಿನಿಂದ ಸುರಕ್ಷಿತವಾಗಿರುವುದಾದರೂ ಹೇಗೆ ಅನ್ನೊ ಪ್ರಶ್ನೆ ಏನಾದರೂ ನಿಮ್ಮದಾಗಿದ್ದರೆ, ಇಲ್ಲಿದೆ ಕೆಲವು ಸಲಹೆಗಳು
ಗುಡುಗು ಸಿಡಿಲಿನ ಸದ್ದು ಬರುತ್ತಲೇ ಮೊಬೈಲ್‌ನ್ನ ದೂರ ಇಟ್ಟು ಬಿಡಿ. ಲೋಹದ ವಸ್ತುಗಳಿಂದ ಅಂತರ ಕಾಪಾಡಿಕೊಳ್ಳಿ. ಎಸಿ, ಫ್ರಿಡ್ಜ್‌ಗಳ ಬಳಕೆ ಬೇಡವೇ ಬೇಡ. ಲೋಹದ ವಸ್ತುಗಳಿಂದ ಅಂತರ ಕಾಪಾಡಿಕೊಳ್ಳಿ, ನೀರಿನಿಂದ ಆದಷ್ಟು ದೂರವಿರಿ, ಮರದ ಬಳಿ ನಿಂತರೆ ಅಪಾಯ ಜಾಸ್ತಿ ಆದ್ದರಿಂದ ಅದರಿಂದ ದೂರ ಇರಿ, ಹಾಗಂತ ಬಯಲು ಪ್ರದೇಶದಲ್ಲೂ ಹೋಗಿ ನಿಲ್ಲುವ ಸಾಹಸ ಮಾಡಬೇಡಿ. ಅದರ ಬದಲು ತಗ್ಗಾದ ಪ್ರದೇಶಗಳಿಗೆ ಹೋಗಿ ನಿಂತರೆ ನೀವು ಸುರಕ್ಷಿತವಾಗಿರಲು ಸಾಧ್ಯ.