ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿರುವ ಕಾಂಗ್ರೆಸ್ ಪಕ್ಷ ಈಗಾಗಲೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಮಂದಿ ಶಾಸಕರುಗಳು ಈ ಹಿಂದೆ ಪ್ರಮಾಣವಚನ ಸ್ವೀಕರಿಸಿದ್ದರು.
ಶುಕ್ರವಾರದಂದು ಮತ್ತೆ 24 ಸಚಿವರುಗಳು ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಗೊಂಡಿದ್ದು, ಖಾತೆ ಹಂಚಿಕೆ ಬಾಕಿ ಉಳಿದಿದೆ. ಇದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ 16 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಮೂಲಕ ಬಹಿರಂಗವಾಗಿದೆ.
ಸಿದ್ದರಾಮಯ್ಯನವರ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದರೆ, ಪ್ರಿಯಾಂಕ್ ಖರ್ಗೆ 9, ಈಶ್ವರ ಖಂಡ್ರೆ 7, ಬಿ ಜೆಡ್ ಜಮೀರ್ ಅಹ್ಮದ್ ಖಾನ್ 6, ಎಂ.ಬಿ. ಪಾಟೀಲ 5, ರಾಮಲಿಂಗಾ ರೆಡ್ಡಿ 4, ಜಿ. ಪರಮೇಶ್ವರ್ 3, ಹೆಚ್.ಕೆ. ಪಾಟೀಲ್, ಡಿ. ಸುಧಾಕರ್, ಸತೀಶ್ ಜಾರಕಿಹೊಳಿ ತಲಾ 2, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಕೆ.ಎಚ್. ಮುನಿಯಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ತಲಾ 1 ಪ್ರಕರಣ ಎದುರಿಸುತ್ತಿದ್ದಾರೆ. ಇನ್ನು ಸಚಿವರುಗಳ ಪೈಕಿ ಬಿ. ನಾಗೇಂದ್ರ ಅತಿ ಹೆಚ್ಚು ಅಂದರೆ ಅವರ ವಿರುದ್ಧ 42 ಕ್ರಿಮಿನಲ್ ಪ್ರಕರಣಗಳಿದ್ದು, ನಂತರದ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ.