
ಬೆಂಗಳೂರು: ಆಟೋದಲ್ಲಿ ತಂದಿದ್ದ ಬಿರಿಯಾನಿಗೆ ಭದ್ರತೆ ದೃಷ್ಟಿಯಿಂದ ನಿರಾಕರಿಸಿದ್ದ ಪೊಲೀಸ್ ಸಿಬ್ಬಂದಿ, ಅದೇ ಬಿರಿಯಾನಿ ಬೆನ್ಜ್ ಕಾರಿಗೆ ಶಿಫ್ಟ್ ಆಗುತ್ತಿದ್ದಂತೆ ಅನುಮತಿ ನೀಡಿದ ಪ್ರಸಂಗ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದಿದೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಇಂದು ಸಚಿವ ಜಮೀರ್ ಅಹ್ಮದ್ ತಮ್ಮ ಬೆಂಬಲಿಗರ ಬಳಿ ಸಿಎಂ ಸಿದ್ದರಾಮಯ್ಯನವರಿಗೆ ಬಿರಿಯಾನಿ ಕಳುಹಿಸಿದ್ದರು.
ಸಚಿವ ಜಮೀರ್ ಬೆಂಬಲಿಗರು ಆಟೋದಲ್ಲಿ ಸಿಎಂ ನಿವಾಸಕ್ಕೆ ಬಿರಿಯಾನಿ ತಂದಿದ್ದಾರೆ. ಆಟೋದಲ್ಲಿ ಬಿರಿಯಾನಿ ತಂದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆಯ ಕಾರಣ ನೀಡಿ ಸಿಎಂ ನಿವಾಸದ ಒಳಗೆ ಪ್ರವೇಶಿಸಲು ಬಿಟ್ಟಿಲ್ಲ. ಈ ವೇಳೆ ಜಮೀರ್ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಕೆಲ ಕಾಲ ಚರ್ಚೆ ನಡೆದಿದೆ.
ಬಳಿಕ ಅದೇ ಬಿರಿಯಾನಿಯನ್ನು ಬೆನ್ಜ್ ಕಾರಿಗೆ ಶಿಫ್ಟ್ ಮಾಡಲಾಗಿದ್ದು, ಬೆನ್ಜ್ ಕಾರಿಗೆ ಬಿರಿಯಾನಿ ಶಿಫ್ಟ್ ಆಗುತ್ತಿದ್ದಂತೆ ಪೊಲೀಸರು ಸಿಎಂ ನಿವಾಸಕ್ಕೆ ಅನುಮತಿ ನೀಡಿದ್ದಾರೆ.