ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಲೇಖಕರು, ಕಲಾವಿದರು ಹಾಗೂ ವಿಜ್ಞಾನಿಗಳು ಬಹಿರಂಗ ಪತ್ರ ಬರೆದು ಗುಡುಗಿದ್ದಾರೆ.
ಯಾರಿಂದಲೋ ಪಡೆದ ಸಲಹೆ ಹಾಗೂ ಕೋಮು ಹಿತಾಸಕ್ತಿಗಳ ಅಜೆಂಡಾಗಳನ್ನೇ ಸಿಎಂ ಜಾರಿಗೆ ತರುತ್ತಿದ್ದಾರೆ. ಅವರು ಜಾರಿಗೆ ತರುತ್ತಿರುವ ಹಲವು ವಿಷಯಗಳು ಸಮಾಜದಲ್ಲಿ ಸೌಹರ್ದತೆ, ಸಹಿಷ್ಣುತೆ ಹಾಗೂ ಶಾಂತಿ ನಾಶವಾಗುವಂತಿವೆ. ಇದರೊಂದಿಗೆ ಧಾರ್ಮಿಕ ಹಕ್ಕುಗಳನ್ನು ದಮನ ಮಾಡುವಂತಹ ಕಾರ್ಯ ನಡೆಯುತ್ತಿದೆ. ಹೀಗಾಗಿ ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಾದ ಅನಿವಾರ್ಯತೆ ಸಿಎಂ ಅವರ ಮುಂದೆ ಇದೆ ಎಂದು ಗುಡುಗಿದ್ದಾರೆ.
ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಗಳು ಅಲ್ಪ ಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ಹಾಗೂ ಆರ್ಥಿಕತೆಗೆ ಧಕ್ಕೆ ಉಂಟು ಮಾಡುವಂತಿವೆ. ಇದೇ ರೀತಿಯ ಧೋರಣೆ ಮುಂದುವರೆದರೆ ಉದ್ಯಮಗಳಿಗೆ ಧಕ್ಕೆಯಾಗಲಿದ್ದು, ಹೂಡಿಕೆ ಪ್ರಮಾಣ ಕುಸಿಯುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ದ್ವೇಷ ಭಾಷಣಗಳು ಹೆಚ್ಚಾಗುತ್ತಿವೆ. ಮತೀಯ ದಾಂಧಲೆ, ಧಾರ್ಮಿಕತೆಯ ಜಗಳಗಳು ಸೇರಿದಂತೆ ಸಮಾಜದಲ್ಲಿ ಅಹಿತಕರ ಘಟನೆಗೆ ಸಾಕ್ಷಿಯಾಗುವಂತೆ ಜನಪ್ರತಿನಿಧಿಗಳ ಮಾತುಗಳು ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.