ಬೆಂಗಳೂರು : ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಜಾರಿಗೊಳಿಸಿದ್ದ ರೈತ ವಿದ್ಯಾ ನಿಧಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.
ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಎಲ್ಲ ರೈತ ಕುಟುಂಬದ ಮಕ್ಕಳು ಅರ್ಹರು ಎಂಬ ನಿಯಮವನ್ನು ಮಾರ್ಪಾಡು ಮಾಡಲಾಗಿದೆ. ಹೀಗಾಗಿ ಎಲ್ಲ ರೈತರ ಮಕ್ಕಳು ಈ ಶಿಷ್ಯ ವೇತನ ಪಡೆಯಬಹುದು.
ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗುತ್ತಿದ್ದಂತೆ ಈ ಯೋಜನೆ ಘೋಷಿಸಿದ್ದರು. ಇದರಿಂದಾಗಿ ರಾಜ್ಯದ 17 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಲಿದೆ. ಈ ಯೋಜನೆಯಂತೆ ಎಂಬಿಬಿಎಸ್, ಬಿಟೆಕ್ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರಿಗೆ 11 ಸಾವಿರ ರೂ. ಶಿಷ್ಯ ವೇತನ ನೀಡಲಾಗುವುದು.
ಕಾನೂನು ಪದವಿ, ವೃತ್ತಿ ಪರ ಕೋರ್ಸ್, ನರ್ಸಿಂಗ್, ಪ್ಯಾರಾಮೆಡಿಕಲ್, ಬಿ ಫಾರ್ಮ್ ವಿದ್ಯಾರ್ಥಿಗಳಿಗೆ 7.5 ಸಾವಿರ ರೂ. ವಿದ್ಯಾರ್ಥಿನಿಯರಿಗೆ 8 ಸಾವಿರ ರೂ. ಹಣವನ್ನು ರಾಜ್ಯ ಸರ್ಕಾರ ನೀಡಲು ಮುಂದಾಗಿದೆ.
ಇನ್ನು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರಿಗೆ 5,500 ರೂ., ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2.5 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರಿಗೆ 3 ಸಾವಿರ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಹೊಸ ಆದೇಶದಂತೆ ಎಲ್ಲ ರೈತರ ಮಕ್ಕಳು ಕೂಡ ಈ ಯೋಜನೆಗೆ ಅರ್ಹರಾಗಿದ್ದಾರೆ.