ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಭೇಟಿಯಾಗಿ ಶಿವಮೊಗ್ಗದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ವಿವರ ನೀಡಿದ್ದಾರೆ.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗದಲ್ಲಿ 6 ಜನ ಗೂಂಡಾಗಳು ಅಮಾಯಕ ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾರೆ. ಪ್ರೇಮ್ ಸಿಂಗ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದು, ಈ ಘಟನೆಯ ಸಂಬಂಧ ಇಂದು ನಸುಕಿನ ಜಾವ ಆರೋಪಿಯನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಆತನು ಪೊಲೀಸರ ಮೇಲೆಯೇ ಹಲ್ಲೆ ಯತ್ನ ನಡೆಸಿದ್ದಾನೆ. ಈ ಸಂಬಂಧ ಫೈರಿಂಗ್ ನಡೆದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ಮೂವರನ್ನು ಬಂಧಿಸಲಾಗಿದೆ. ಇನ್ನೂ ಕೆಲವು ಆರೋಪಿಗಳು ಸಿಗಬೇಕಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗ ಜನ ಶಾಂತಿಪ್ರಿಯರು. ಹೊರಗಡೆಯಿಂದ ಬಂದ ಜನರಿಂದ ಈ ಕೃತ್ಯ ನಡೆದಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಘಟನೆಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೇ ಪೊಲೀಸ್ ಇಲಾಖೆ ಸಹ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡಿದ್ದಾರೆ ಎಂದರು.
ಮುಸ್ಲಿಂ ಸಮುದಾಯದಲ್ಲಿರುವ ಕೆಲವು ಗೂಂಡಾಗಳನ್ನು ಅವರ ಹಿರಿಯರು ಕರೆದು ಬುದ್ಧಿವಾದ ಹೇಳಬೇಕು. ಇಲ್ಲವೆಂದರೆ ಅಂತಹ ಗೂಂಡಾಗಳನ್ನು ಸರ್ಕಾರವೇ ನೋಡಿಕೊಳ್ಳಲಿದೆ. ಘಟನೆಗೆ ಎಸ್.ಡಿ.ಪಿ.ಐ. ಕಾರಣವಾಗಿದ್ದು, ಎಸ್.ಡಿ.ಪಿ.ಐ. ಬ್ಯಾನ್ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದು, ಅದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುತ್ತೆ ಎನ್ನುವ ನಂಬಿಕೆ ಇದೆ ಎಂದರು.
ಸರ್ಕಾರದಲ್ಲಿ ಮ್ಯಾನೇಜ್ ಮಾಡುವ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧುಸ್ವಾಮಿ ಕಾನೂನನ್ನು ಚೆನ್ನಾಗಿ ಅರಿತಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ. ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದರೆ ಸರಿ ಇರಲ್ಲ. ಮುಸಲ್ಮಾನ್ ಸಮುದಾಯದವರು ಮಾಡುವ ಹಬ್ಬಕ್ಕೆ ಹಿಂದೂಗಳು ಬೆಂಬಲ ನೀಡುತ್ತಾರೆ. ಹಾಗೆಯೇ ನಾವುಗಳು ಆಚರಿಸುವ ಹಬ್ಬಕ್ಕೆ ಬೆಂಬಲ ನೀಡಬೇಕು. ಮುಸಲ್ಮಾನ್ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಈ ಗಲಭೆ ಹಿಂದೆ ಕಾಂಗ್ರೆಸ್ ನವರು ಇದ್ದಾರೆ ಎಂಬುದಕ್ಕೆ ಘಟನೆ ಬಗ್ಗೆ ಕಾಂಗ್ರೆಸ್ ನವರು ಖಂಡಿಸಿಲ್ಲ ಎಂದರು.
ಸಾವರ್ಕರ್ ಬ್ಯಾನರ್ ಹರಿದು ಹಾಕಿದವನು ಕಾಂಗ್ರೆಸ್ ಕಾರ್ಪೊರೇಟರ್ ಪತಿ. ಆತ ಎಸ್.ಡಿ.ಪಿ.ಐ. ಕಾರ್ಯಕರ್ತ. ಕಾಂಗ್ರೆಸ್ ನವರು ಬಿಜೆಪಿಯವರು ಕೋಮುಗಲಭೆ ಸೃಷ್ಠಿಸುತ್ತಾರೆ ಎಂದು ಆರೋಪ ಮಾಡುತ್ತಾರೆ. ಆದರೆ ಕೋಮುಗಲಭೆ ಸೃಷ್ಠಿಸುವವರು ಕಾಂಗ್ರೆಸ್ ಕಾರ್ಪೊರೇಟರ್ ಪತಿ ಎಂದು ಹೇಳಿದರು.