ಬೆಳಗಾವಿ: ಕುಂದಾನಗರಿ ಬೆಳಗಾವಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ರೈತ ಭಾವುಕನಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ.
ವಿಧಾನಪರಿಷತ್ ಚುನಾವಣೆ ಹಾಗೂ ಡಿಸೆಂಬರ್ 13ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ಆರಂಭವಾಗಲಿರುವ ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿಗೆ ಭೇಟಿ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಖಾಸಗಿ ರೆಸಾರ್ಟ್ ನಲ್ಲಿ ಸಭೆ ನಡೆಸಿದ್ದರು. ಈ ವೇಳೆ ರೈತ ಮುಖಂಡ ರವಿ ಪಾಟೀಲ್ ಸಿಎಂ ಭೇಟಿಗಾಗಿ ಬಂದಿದ್ದರು. ಆದರೆ ರವಿ ಪಾಟೀಲ್ ಅವರನ್ನು ತಡೆದ ಪೊಲೀಸರು ಸಿಎಂ ಬೊಮ್ಮಾಯಿ ಭೇಟಿಗೆ ಅವಕಾಶ ನೀಡಲಿಲ್ಲ.
ಇದರಿಂದ ಭಾವುಕನಾಗಿ ಕಣ್ಣೀರಿಟ್ಟ ರೈತ ರವಿ ಪಾಟೀಲ್, ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾನಿಗೀಡಾಗಿದೆ. ಪರಿಹಾರ ಸಿಗದೇ ಸಂಕಷ್ಟಕ್ಕೀಡಾಗಿದ್ದೇನೆ. ಬೆಳೆದ ಬೆಳೆ ಕೈಗೆ ಸಿಗದೇ ಹಲವು ರೈತರು ತೊಂದರೆಗೀಡಾಗಿದ್ದಾರೆ. ತಕ್ಷಣ ಸೂಕ್ತ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕೆಂದು ಬಂದಿರುವೆ. ಸಿಎಂ ಭೇಟಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಆದರೂ ಒಪ್ಪದ ಪೊಲೀಸರು ರವಿ ಪಾಟೀಲ್ ನನ್ನು ಸ್ಥಳದಿಂದ ತೆರಳಲು ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ, ರೈತರ ಸಂಕಷ್ಟವನ್ನು ಆಲಿಸದ ಸಿಎಂ ಯಾವ ಸೀಮೆ ಸಿಎಂ? ಪೊಲೀಸರು ಸಿಎಂ ಭೇಟಿಯಾಗಲು ಬಿಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.