ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರದಂದು ನಾಮಪತ್ರ ಸಲ್ಲಿಸಿದ್ದಾರೆ. ಅವರ ಈ ನಾಮಪತ್ರ ಸಲ್ಲಿಕೆ ಸಾಂಕೇತಿಕವಾಗಿದ್ದು, ಏಪ್ರಿಲ್ 19ರಂದು ಬೃಹತ್ ರೋಡ್ ಶೋ ನಡೆಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಶನಿವಾರದಂದು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಬಸವರಾಜ ಬೊಮ್ಮಾಯಿ ತಮ್ಮ ಹಾಗೂ ಕುಟುಂಬದ ಆಸ್ತಿ ವಿವರವನ್ನು ಘೋಷಿಸಿದ್ದು, ಇವರ ಬಳಿ ಸ್ವಂತ ಕಾರು ಇಲ್ಲ. ಅಲ್ಲದೆ ಬಸವರಾಜ ಬೊಮ್ಮಾಯಿ ತಮ್ಮ ಪತ್ನಿಗಿಂತ ಅಧಿಕ ಮೌಲ್ಯದ ಚಿನ್ನಾಭರಣವನ್ನು ಹೊಂದಿದ್ದಾರೆ.
ಬಸವರಾಜ ಬೊಮ್ಮಾಯಿ ಹೊಂದಿರುವ ಚಿನ್ನಾಭರಣದ ಮೌಲ್ಯ 1.5 ಕೋಟಿ ರೂಪಾಯಿಗಳಾಗಿದ್ದರೆ ಅವರ ಪತ್ನಿ ಬಳಿ 78.83 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದೆ. ಮಗಳ ಬಳಿ 53.84 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದು, ಕುಟುಂಬದ ಬಳಿ 13.78 ಲಕ್ಷ ರೂಪಾಯಿ ಚಿನ್ನಾಭರಣವಿದೆ.
ಇನ್ನು ಅವರ ಕುಟುಂಬದ ಚರಾಸ್ತಿ 5.98 ಕೋಟಿ ರೂಪಾಯಿಗಳಾಗಿದ್ದು, ಸ್ಥಿರಾಸ್ತಿ 22.95 ಕೋಟಿ ರೂಪಾಯಿಗಳಾಗಿದೆ. ಸಿಎಂ ಪತ್ನಿ ಬಳಿ ಯಾವುದೇ ಚರಾಸ್ತಿ ಇಲ್ಲ. ಆದರೆ ಅವರು 1.14 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವಿಭಜಿತ ಕುಟುಂಬದ ಚರಾಸ್ತಿ 1.57 ಕೋಟಿ ರೂಪಾಯಿಗಳಾಗಿದ್ದು, ಸ್ಥಿರಾಸ್ತಿ 19.20 ಕೋಟಿ ರೂಪಾಯಿಗಳಾಗಿದೆ. ಪುತ್ರಿ 1.28 ಕೋಟಿ ರೂಪಾಯಿ ಚರಾಸ್ತಿ ಹೊಂದಿದ್ದಾರೆ.