ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆದಿದ್ದು, ಸರ್ಕಾರ ರಚನೆಯ ಸಿದ್ಧತೆಯಲ್ಲಿದೆ. ಆದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಕಗ್ಗಂಟು ಇನ್ನೂ ಮುಂದುವರೆದಿದ್ದು ಈಗ ಈ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ.
ಮುಖ್ಯಮಂತ್ರಿ ಆಯ್ಕೆಗಾಗಿ ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ಆಲಿಸಿದ್ದು, ಇದರಲ್ಲಿ ಬಹುತೇಕ ಮಂದಿ ಸಿದ್ದರಾಮಯ್ಯ ಪರ ಒಲವು ತೋರಿಸಿದ್ದಾರೆ ಎಂದು ಹೇಳಲಾಗಿದೆ. ಈ ವರದಿಯನ್ನು ಈಗಾಗಲೇ ಪಕ್ಷದ ವರಿಷ್ಠ ನಾಯಕರ ಗಮನಕ್ಕೆ ತರಲಾಗಿದೆ.
ಇದರ ಮಧ್ಯೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಪರ ಶಾಸಕರು ಒಲವು ತೋರಿರುವ ವಿಚಾರ ಅರಿತು, ಪತ್ರಿಕಾಗೋಷ್ಠಿಯಲ್ಲಿ ನನಗೆ ನನ್ನ ಅಧ್ಯಕ್ಷತೆಯಲ್ಲಿ ಆಯ್ಕೆ ಆಗಿರುವ 135 ಮಂದಿ ಮಾತ್ರ ಗೊತ್ತು ಎಂದು ಮಾರ್ಮಿಕವಾಗಿ ಹೇಳಿದ್ದರು.
ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಈಗಾಗಲೇ ನವದೆಹಲಿಯಲ್ಲಿ ಇದ್ದು, ಅನಾರೋಗ್ಯದ ಕಾರಣಕ್ಕೆ ನಿನ್ನೆಯ ದೆಹಲಿ ಪ್ರವಾಸ ರದ್ದು ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ತೆರಳಲಿದ್ದಾರೆ. ಆ ಬಳಿಕ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯ ಗೊಂದಲ ಬಗೆಹರಿಯಲಿದೆ ಎಂದು ಹೇಳಲಾಗುತ್ತಿದೆ.