ಸಾಮಾನ್ಯವಾಗಿ ಖಾಸಗಿ ಉದ್ಯೋಗದಲ್ಲಿ ದೊಡ್ಡ ಹುದ್ದೆ, ಪ್ರಮೋಷನ್ ಜೊತೆಗೆ ಸಂಬಳ ಕೂಡ ಬೇಗನೆ ಏರಿಕೆಯಾಗುತ್ತದೆ. ಸಿಇಓ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ (ಟಿಸಿಎಸ್) ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ವೇತನದಲ್ಲಿ ಏರಿಕೆಯಾಗಿದೆ.
ಅವರ ಒಟ್ಟು ಸಂಭಾವನೆ ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2022-23 ರಲ್ಲಿ 29.16 ಕೋಟಿ ರೂಪಾಯಿ ಆಗಿದ್ದು, ಶೇ.13.17 ರಷ್ಟು ಹೆಚ್ಚಾಗಿದೆ.
2022-23ರ ಕಂಪನಿಯ ವಾರ್ಷಿಕ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಗೋಪಿನಾಥನ್ ಕಮಿಷನ್ ರೂಪದಲ್ಲಿ 25 ಕೋಟಿ ರೂಪಾಯಿ ಪಡೆದಿದ್ದಾರೆ. ವೇತನ 1.73 ಕೋಟಿ ರೂಪಾಯಿ ಮತ್ತು ಇತರ ಸೌಲಭ್ಯಗಳ ರೂಪದಲ್ಲಿ 2.43 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಟಿಸಿಎಸ್ ತಿಳಿಸಿದೆ. ಗೋಪಿನಾಥನ್ ಅವರು ಮೇ 31ರವರೆಗೆ ಕಂಪನಿಯ ಸಿಇಓ ಆಗಿದ್ದರು. ಆರು ವರ್ಷಗಳ ಕಾಲ ಈ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
2021-22ನೇ ಹಣಕಾಸು ವರ್ಷದಲ್ಲಿ ಅವರು ಒಟ್ಟು 25.76 ಕೋಟಿ ರೂಪಾಯಿ ವೇತನ ಮತ್ತು ಇತರ ಸೌಲಭ್ಯಗಳನ್ನು ಪಡೆದಿದ್ದರು. ಅತಿದೊಡ್ಡ ಕಂಪನಿಯ ಮುಖ್ಯಸ್ಥರಾಗಿದ್ದರೂ ಸಹ, ಗೋಪಿನಾಥನ್ ಅವರ ಸಂಬಳವು ಅವರ ಹಿಂದಿನ ಸಿಇಓ ಎನ್ ಚಂದ್ರಶೇಖರನ್ ಅವರು ಕಂಪನಿಯಲ್ಲಿ 2016-17ರಲ್ಲಿ ಪಡೆದಿದ್ದಕ್ಕಿಂತ ಕಡಿಮೆಯಾಗಿದೆ. ಟಾಟಾ ಸನ್ಸ್ ಅಧ್ಯಕ್ಷರಾಗುವ ಮೊದಲು, ಚಂದ್ರಶೇಖರನ್ ಟಿಸಿಎಸ್ ಸಿಇಓ ಆಗಿದ್ದರು. ಮುಖ್ಯ ಹಣಕಾಸು ಅಧಿಕಾರಿ (CFO) ನಿಂದ ಬಡ್ತಿ ಪಡೆದ ನಂತರ, ಚಂದ್ರಶೇಖರನ್ ಅವರ ವೇತನವು 2016-17 ರಲ್ಲಿ 6.22 ಕೋಟಿ ರೂಪಾಯಿಗಳಿಂದ 2017-18 ರಲ್ಲಿ 12.5 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು.
ಗೋಪಿನಾಥನ್ ಅವರ ಉತ್ತರಾಧಿಕಾರಿ ಕೆ. ಕೃತಿವಾಸನ್ ಅವರು ತಿಂಗಳಿಗೆ 10 ಲಕ್ಷ ರೂಪಾಯಿ ಮೂಲ ವೇತನವನ್ನು ಪಡೆಯುತ್ತಾರೆ. ಇದು 16 ಲಕ್ಷ ರೂಪಾಯಿಗಳಿಗೆ ಏರಬಹುದು. ಇದಲ್ಲದೇ ಆಡಳಿತ ಮಂಡಳಿ ನಿರ್ಧರಿಸಿದಂತೆ ಕಮಿಷನ್ ಹಾಗೂ ಉಚಿತ ವಸತಿ ಸೌಲಭ್ಯವೂ ಸಿಗಲಿದೆ.ಇನ್ನು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಓಓ) ಎನ್‌ಜಿ ಸುಬ್ರಮಣ್ಯಂ ಅವರು 2022-23ರ ಹಣಕಾಸು ವರ್ಷದಲ್ಲಿ ಒಟ್ಟು 23.60 ಕೋಟಿ ರೂಪಾಯಿ ವೇತನ ತಮ್ಮದಾಗಿಸಿಕೊಂಡಿದ್ದಾರೆ. ಹಿಂದಿನ ಹಣಕಾಸು ವರ್ಷದಲ್ಲಿ ಈ ಮೊತ್ತ ಸುಮಾರು 20 ಕೋಟಿ ರೂಪಾಯಿಯಷ್ಟಿತ್ತು.