
1960ರ ಸಪ್ಟೆಂಬರ್‌ನಲ್ಲಿ ಕೈಗೊಂಡಿರುವ ಸಿಂಧೂ ಜಲ ಒಪ್ಪಂದ (IWT) ತಿದ್ದುಪಡಿಗಾಗಿ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ. ‘ಪಾಕಿಸ್ತಾನದ ಎಲ್ಲಾ ತಪ್ಪು ಕ್ರಮಗಳು ಸಿಂಧೂ ಜಲ ಒಪ್ಪಂದದ ನಿಬಂಧನೆಗಳು ಮತ್ತು ಅವುಗಳ ಅನುಷ್ಠಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಹಾಗಾಗಿ IWT ಪರಿಷ್ಕರಣೆಯ ಅಗತ್ಯವಿದೆ ಎಂದು ನೋಟಿಸ್‌ನಲ್ಲಿ ಭಾರತ ಪ್ರತಿಪಾದಿಸಿದೆ. ಮೂಲಗಳ ಪ್ರಕಾರ ಪಾಕಿಸ್ತಾನದ ವರ್ತನೆಗಳ ಬಗ್ಗೆ ಭಾರತ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜವಾಬ್ಧಾರಿಯುತವಾಗಿ ಜನ ಒಪ್ಪಂದ ಅನುಷ್ಠಾನಕ್ಕೆ ಭಾರತ-ಪಾಕಿಸ್ತಾನ ನಿಶ್ಚಯಿಸಿದ್ದವು.
ಆದರೆ ಪಾಕಿಸ್ತಾನ ಅದನ್ನು ಉಲ್ಲಂಘಿಸಿದೆ. ಭಾರತವು ಪರಸ್ಪರ ಮಧ್ಯಸ್ಥಿಕೆಯ ಮಾರ್ಗವನ್ನು ಕಂಡುಕೊಳ್ಳಲು ಪದೇ ಪದೇ ಪ್ರಯತ್ನಿಸುತ್ತಿದ್ದರೂ, 2017 ರಿಂದ 2022 ರವರೆಗೆ ಶಾಶ್ವತ ಸಿಂಧೂ ಆಯೋಗದ 5 ಸಭೆಗಳಲ್ಲಿ ಈ ವಿಷಯವನ್ನು ಚರ್ಚಿಸಲು ಪಾಕಿಸ್ತಾನ ನಿರಾಕರಿಸಿದೆ. ಹಾಗಾಗಿಯೇ ಪಾಕಿಸ್ತಾನಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯನ್ನು ಸರಿಪಡಿಸಲು 90 ದಿನಗಳೊಳಗೆ ಅಂತರ-ಸರ್ಕಾರಿ ಮಾತುಕತೆಗೆ ಪ್ರವೇಶಿಸಲು ಪಾಕಿಸ್ತಾನಕ್ಕೆ ಅವಕಾಶವನ್ನು ಒದಗಿಸುವುದು ಈ ಸೂಚನೆಯ ಉದ್ದೇಶ. ಈ ಪ್ರಕ್ರಿಯೆಯು ಕಳೆದ 62 ವರ್ಷಗಳಲ್ಲಿನ ಪರಿಸ್ಥಿತಿಯ ಬದಲಾವಣೆಗಳಿಗೆ ಅನುಗುಣವಾಗಿ ಸಿಂಧೂ ಜಲ ಒಪ್ಪಂದವನ್ನು ನವೀಕರಿಸುತ್ತದೆ.
ವಾಸ್ತವವಾಗಿ ಸಿಂಧೂ ಜಲ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ, ಸಟ್ಲೆಜ್, ಬಿಯಾಸ್ ಮತ್ತು ರವಿಯ ನೀರನ್ನು ಭಾರತಕ್ಕೆ, ಹಾಗೂ ಸಿಂಧೂ, ಜೀಲಂ ಮತ್ತು ಚೆನಾಬ್ ನೀರನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಭಾರತ ಮತ್ತು ಪಾಕಿಸ್ತಾನವು 9 ವರ್ಷಗಳ ಮಾತುಕತೆಯ ನಂತರ 19 ಸೆಪ್ಟೆಂಬರ್ 1960 ರಂದು ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದಕ್ಕೆ ವಿಶ್ವ ಬ್ಯಾಂಕ್ ಸಹ ಸಹಿ ಹಾಕಿತ್ತು. ಎರಡೂ ದೇಶಗಳ ಜಲ ಕಮಿಷನರ್‌ಗಳು ವರ್ಷಕ್ಕೆ ಎರಡು ಬಾರಿ ಭೇಟಿಯಾಗುತ್ತಾರೆ. ಆದರೆ ಪಾಕಿಸ್ತಾನವು ಈ ಒಪ್ಪಂದದ ನಿಯಮಗಳು ಮತ್ತು ನಿಬಂಧನೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದೆ. ಜೀವಜಲವನ್ನು ವ್ಯರ್ಥ ಮಾಡುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಇದೀಗ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದೆ.