ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರದಂದು ಬಿಡುಗಡೆ ಮಾಡಿದ್ದು, ಹಾಲಿ 10 ಶಾಸಕರಿಗೆ ಕೊಕ್ ನೀಡಲಾಗಿದೆ. ಸಚಿವರುಗಳಾದ ಎಸ್. ಅಂಗಾರ, ಆನಂದ್ ಸಿಂಗ್ ಟಿಕೆಟ್ ವಂಚಿತರಾಗಿದ್ದು ಆದರೆ ಆನಂದ್ ಸಿಂಗ್ ಪುತ್ರನಿಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನುಳಿದಂತೆ ಅನಿಲ್ ಬೆನಕೆ, ರಾಮಪ್ಪ ಲಮಾಣಿ, ಗೂಳಿಹಟ್ಟಿ ಶೇಖರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಮೆಂಡನ್, ಸಂಜೀವ್ ಮಠಂದೂರು ಹಾಗೂ ಮಹಾದೇವಪ್ಪ ಯಾದವಾಡ ಟಿಕೆಟ್ ವಂಚಿತರಾಗಿದ್ದು ಈ ಪೈಕಿ ಹಾಲಾಡಿ ಶ್ರೀನಿವಾಸ ಶೆಟ್ಟರು ಮೊದಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.
ಇನ್ನು ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೆ ತೀವ್ರ ನಿರಾಸೆಯಾಗಿದ್ದು, ಇಲ್ಲಿಂದ ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಜೊತೆಗೆ ರಮೇಶ್ ಜಾರಕಿಹೊಳಿ ಗೋಕಾಕ್ ನಿಂದ ಹಾಗೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅರಭಾವಿಯಿಂದ ಕಣಕ್ಕಿಳಿಯುತ್ತಿದ್ದು, ಬೆಳಗಾವಿಯಲ್ಲಿ ಸಾಹುಕಾರ್ ಮೇಲುಗೈ ಸಾಧಿಸಿದಂತಾಗಿದೆ.
ಅಥಣಿ ಕ್ಷೇತ್ರದ ಟಿಕೆಟ್ ತಮ್ಮ ಕೈತಪ್ಪುತ್ತಿದ್ದಂತೆ ಸಿಡಿದೆದ್ದಿರುವ ಲಕ್ಷ್ಮಣ ಸವದಿ ತಾವು ಚುನಾವಣೆಯಲ್ಲಿ ಕಣಕ್ಕಿಳಿಯುವುದು ಖಚಿತ ಎಂದು ಹೇಳುತ್ತಿದ್ದು, ಇವರು ಕಾಂಗ್ರೆಸ್ ಅಭ್ಯರ್ಥಿಯಾಗಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಬಳಿಕ ಬಹುತೇಕ ಟಿಕೆಟ್ ವಂಚಿತರು ಆಕ್ರೋಶಗೊಂಡಿದ್ದು, ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.