ಬೈಲಹೊಂಗಲ: ರೈತರೊಬ್ಬರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದನ್ನು ವಿರೋಧಿಸಿ ರೈತರು ಹಾಗೂ ರೈತ ಸಂಘಟನೆ ಪಿಎಲ್ ಡಿ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿವೆ.
ಇಲ್ಲಿಯ ಪಿಎಲ್ ಡಿ ಬ್ಯಾಂಕ್ ನಲ್ಲಿ ರೈತ ಮಲ್ಲಪ್ಪ ತಲ್ಲೂರ ಎಂಬುವವರು 7.58 ಲಕ್ಷ ರೂ. ಸಾಲ ಪಡೆದಿದ್ದರು. ಸದ್ಯ ಈ ಸಾಲ 12 ಲಕ್ಷ ರೂಪಾಯಿ ಆಗಿದೆ. ಆದರೆ, ಈ ರೈತರಿಗೆ ಆರ್ಥಿಕ ಸಂಕಷ್ಟದಿಂದಾಗಿ ಸಾಲವನ್ನು ಮರು ಪಾವತಿ ಮಾಡಲು ಆಗಿರಲ್ಲ. ಹೀಗಾಗಿ ಸಾಲ ಮರು ಪಾವತಿಗೆ ಅವಕಾಶ ಕೇಳಿದ್ದಾರೆ. ಇದಕ್ಕೆ ಒಪ್ಪದ ಬ್ಯಾಂಕ್ ಸಿಬ್ಬಂದಿ ಟ್ರ್ಯಾಕ್ಟರ್ ಸೀಜ್ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಪ್ರಕೃತಿ ವಿಕೋಪ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ರೈತರಿಗೆ ಸಾಲ ಮರು ಪಾವತಿ ಮಾಡಲು ಆಗುತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ, ಸಾಲದ ಬಡ್ಡಿ ವಿನಾಯಿತಿ ಮಾಡಬೇಕು. ಅಸಲನ್ನು ಮಾತ್ರ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮರು ಪಾವತಿಸಿಕೊಳ್ಳಬೇಕು ಎಂದು ಹೇಳಿದ್ದರೂ, ಬ್ಯಾಂಕ್ ನವರು ರೈತರಿಗೆ ನೊಟೀಸ್ ನೀಡಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಬ್ಯಾಂಕ್ ಗೆ ನುಗ್ಗಿ, ಗೇಟ್ ಹಾಗೂ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬ್ಯಾಂಕ್ ಮ್ಯಾನೇಜರ್ ಎಂ.ಟಿ. ಗಾಣಿಗೇರ ಹಾಗೂ ಬ್ಯಾಂಕ್ ನಿರ್ದೇಶಕ ಶಿವಬಸು ಕುಡಸೋಮಣ್ಣವರ ಬಂದು ರೈತರ ಮನವೊಲಿಸಿದರು. ಆ ನಂತರ ಟ್ರ್ಯಾಕ್ಟರ್ ನ್ನು ರೈತರಿಗೆ ಒಪ್ಪಿಸಲಾಯಿತು.