ಒಂದು ಕಾಲದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಗುಂಡ ರವೀಂದರ್ ಎಂಬುವವರು ಕೆಸಿಆರ್ ಅವರ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನ ನಿರ್ಮಿಸಿದ್ದರು. ಇದಕ್ಕಾಗಿ ಸಾಲ ಮಾಡಿಕೊಂಡಿದ್ದು, ಮರುಪಾವತಿ ಮಾಡುವುದಕ್ಕಾಗಿ ಪ್ರತಿಮೆಯನ್ನು ಮಾರಾಟ ಮಾಡಲು ಅವರು ನಿರ್ಧರಿಸಿದ್ದಾರೆ.
ವರದಿಯ ಪ್ರಕಾರ, ಒಂದು ಕಾಲದಲ್ಲಿ ಕೆಸಿಆರ್ ಅವರ ಕಟ್ಟಾ ಅನುಯಾಯಿಯಾಗಿದ್ದ ಗುಂಡ ರವೀಂದರ್, 2016 ರಲ್ಲಿ ಕೆಸಿಆರ್ ಅವರ ಅಮೃತಶಿಲೆಯ ಪ್ರತಿಮೆಯನ್ನು ನಿರ್ಮಿಸಿದ್ದರು.
ಮಂಚೇರಿಯಲ್ ಜಿಲ್ಲೆಯ ದಾಂಡೇಪಲ್ಲಿ ಮಂಡಲದ ಪ್ರಧಾನ ಕಚೇರಿಯ ಅವರ ಮನೆ ಮುಂದೆ ಪ್ರತಿಮೆ ನಿರ್ಮಿಸಿದ್ದರು. ರವೀಂದರ್ ಮತ್ತು ಅವರ ಕುಟುಂಬ ಕೆಸಿಆರ್ ಅವರನ್ನು ದೇವರಂತೆ ಪೂಜಿಸುತ್ತಿದ್ದರು.
ಇದೀಗ ಈ ಪ್ರತಿಮೆಯನ್ನು ಚೀಲಗಳಿಂದ ಮುಚ್ಚಿದ್ದಾರೆ ಮತ್ತು ಸಾಲಗಳನ್ನು ಮರುಪಾವತಿಸಲು ಅದನ್ನು ಮಾರಾಟ ಮಾಡಲು ಬಯಸಿದ್ದಾರೆ. ಜೊತೆಗೆ ಕೆಸಿಆರ್ ಅವರ ಧೋರಣೆ ಬಗ್ಗೆ ಬೇಸತ್ತಿದ್ದಾರೆ. ತೆಲಂಗಾಣ ರಾಜ್ಯ ರಚನೆಯಾದ ನಂತರ ಟಿಆರ್‌ಎಸ್‌ನಲ್ಲಿ ಸೂಕ್ತ ಮನ್ನಣೆ ಸಿಗಲಿಲ್ಲ ಎಂದು ರವೀಂದರ್ ಆರೋಪಿಸಿದ್ದಾರೆ.
ಕೆಸಿಆರ್ ಅಥವಾ ಅವರ ಪುತ್ರ ಕೆಟಿಆರ್ ಅವರನ್ನು ಭೇಟಿಯಾಗುವ ಅವಕಾಶ ಕೂಡ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ. ಪಕ್ಷದ ಕೆಲವು ನಾಯಕರು ತನಗೆ ಬರಲು ಅವಕಾಶ ನೀಡಲಿಲ್ಲ. ಜೊತೆಗೆ ತಮ್ಮ ಏಕೈಕ ಆದಾಯದ ಮೂಲವಾದ ಕೇಬಲ್ ಟಿವಿ ನೆಟ್‌ವರ್ಕ್ ಅನ್ನು ಸಹ ಕಳೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ತೆಲಂಗಾಣ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ ಎಂದು ಹೇಳಿಕೊಂಡಿರುವ ರವೀಂದರ್, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥರಿಗೆ ದೇವಸ್ಥಾನವನ್ನು ಹೆಮ್ಮೆಯಿಂದ ತೋರಿಸುತ್ತಿದ್ದರು.
“ತೆಲಂಗಾಣದ ಪ್ರೀತಿಯ ಮಗ ಮತ್ತು ನಾಲ್ಕು ಕೋಟಿ ಜನರ ಭರವಸೆ” ಎಂಬ ಪದಗಳನ್ನು ದೇವಸ್ಥಾನದಲ್ಲಿ ಕೆತ್ತಲಾಗಿದೆ. ಈ ದೇವಾಲಯವನ್ನು ನಿರ್ಮಿಸಲು ಮತ್ತು ಪ್ರತಿಮೆಯನ್ನು ಸ್ಥಾಪಿಸಲು ಒಟ್ಟು 3 ಲಕ್ಷ ರೂ. ಖರ್ಚು ಮಾಡಿದ್ದರಂತೆ. ದೇಗುಲ ನಿರ್ಮಾಣ ಮತ್ತು ಚಳವಳಿಯಲ್ಲಿ ಭಾಗವಹಿಸುವುದಕ್ಕಾಗಿ ಅವರು ಸಾಲ ಪಡೆದಿದ್ದಾರೆ ಎಂದು ಹೇಳಿದ್ದು, ಇದೀಗ ಮರುಪಾವತಿಸಲು ಪ್ರತಿಮೆ ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.