ಈ ಬಾರಿ ಆಯುಧ ಪೂಜೆ ಹಾಗೂ ವಿಜಯದಶಮಿ ಮಂಗಳವಾರ ಮತ್ತು ಬುಧವಾರ ಬಂದಿರುವ ಹಿನ್ನೆಲೆಯಲ್ಲಿ, ಬಹಳಷ್ಟು ಕಂಪನಿಗಳಿಗೆ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಶುಕ್ರವಾರ ಸಂಜೆಯಿಂದಲೇ ಜನ ತಮ್ಮ ತಮ್ಮ ಊರುಗಳಿಗೆ, ಪ್ರವಾಸಿ ತಾಣಗಳಿಗೆ ತೆರಳಿದ್ದಾರೆ.
ಸಾಲು ಸಾಲು ರಜೆ ಇರುವ ಕಾರಣ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿದ್ದು, ರೆಸಾರ್ಟ್, ಲಾಡ್ಜ್ ಎಲ್ಲವೂ ಬಹುತೇಕ ಭರ್ತಿಯಾಗಿವೆ. ಪ್ರವಾಸಿ ತಾಣಗಳಿಗೆ ತೆರಳುವ ಮಾರ್ಗಗಳು ವಾಹನಗಳಿಂದ ಕಿಕ್ಕಿರಿದು ತುಂಬಿದ್ದು, ಶನಿವಾರ, ಭಾನುವಾರ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ತನ್ನ ಎಂದಿನ ವೈಭವವನ್ನು ಮರಳಿ ಪಡೆದುಕೊಂಡಿದ್ದು, ಇದನ್ನು ವೀಕ್ಷಿಸಲು ದೇಶ, ವಿದೇಶಗಳಿಂದಲೂ ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ವಾಸ್ತವ್ಯಕ್ಕೆ ಹೋಟೆಲ್ ಕೊಠಡಿ ಸಿಗುವುದೇ ದುಸ್ತರವಾಗಿದೆ.
ಬುಧವಾರದವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದ್ದು, ಪ್ರವಾಸಿ ತಾಣಗಳಲ್ಲಿ ವ್ಯಾಪಾರ ವಹಿವಾಟು ಮುಗಿಲುಮುಟ್ಟಿದೆ. ಕುಟುಂಬ ಸದಸ್ಯರ ಜೊತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವ ಜನ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇಂದಿನಿಂದ ದಸರಾ ರಜೆ ಕೂಡ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ಸ್ಥಳಗಳಿಗೆ ಜನರ ಭೇಟಿ ಮತ್ತಷ್ಟು ಹೆಚ್ಚಾಗಲಿದೆ.