ರೈತರು ಉತ್ತಮ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೆ ನಷ್ಟಕ್ಕೀಡಾಗುವುದು ನಿರಂತರವಾಗಿ ನಡೆದು ಬಂದಿದೆ. ಸಾಲಸೋಲ ಮಾಡಿ ಬೆಳೆದ ಬೆಳೆ ಪ್ರಾಕೃತಿಕ ವಿಕೋಪಗಳಾದ ಮಳೆ, ಗಾಳಿಯ ಪರಿಣಾಮದಿಂದಲೂ ಹಾನಿಯಾಗುತ್ತದೆ. ಹೀಗಾಗಿ ದೇಶದಲ್ಲಿ ಪ್ರತಿವರ್ಷ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಸರ್ಕಾರಗಳು ರೈತರ ನೆರವಿಗೆ ಬರಬೇಕೆಂಬ ಕೂಗು ಈ ಹಿಂದಿನಿಂದಲೂ ಕೇಳಿಬರುತ್ತಿದ್ದು ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮತ್ತೊಬ್ಬ ರೈತ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ರಿಪ್ಪನ್ ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದ ರೈತ 34 ವರ್ಷದ ವಸಂತ ಕುಮಾರ ಆತ್ಮಹತ್ಯೆಗೆ ಶರಣಾಗಿದ್ದು, ಈತ ಸಂಘ – ಸಂಸ್ಥೆ ಹಾಗೂ ಖಾಸಗಿಯವರ ಬಳಿ 15 ಲಕ್ಷ ರೂಪಾಯಿಗಳಿಗೂ ಅಧಿಕ ಸಾಲ ಮಾಡಿದ್ದಾರೆಂದು ಹೇಳಲಾಗಿದೆ.