‘ಅದೃಷ್ಟ’ ಎಂಬುದು ಯಾರಿಗೆ ಯಾವ ರೂಪದಲ್ಲಿ ಹಾಗೂ ಯಾವ ಸಂದರ್ಭದಲ್ಲಿ ಒಲಿದು ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇಂಥವುದೇ ಒಂದು ಪ್ರಕರಣದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕನೊಬ್ಬನಿಗೆ ಇನ್ನೇನು ಮನೆ ಮಾರಾಟ ಮಾಡಬೇಕು ಎಂಬ ಸಂದರ್ಭದಲ್ಲಿ ಅದೃಷ್ಟ ಆತನ ಕೈಹಿಡಿದಿದೆ.
ಹೌದು, ಕಾಸರಗೋಡು ಜಿಲ್ಲೆ ಮಂಜೇಶ್ವರ ಪಂಚಾಯಿತಿಯ ಪಾವೂರು ನಿವಾಸಿ ಪೇಂಟಿಂಗ್ ಕಾರ್ಮಿಕ ಮಹಮ್ಮದ್ ಎಂಬಾತನಿಗೆ ಕೇರಳ ರಾಜ್ಯ ಲಾಟರಿಯಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಬಹುಮಾನ ಬಂದಿದೆ.
ಮಹಮ್ಮದ್ ಸಾಲ ಮಾಡಿ ಮನೆ ಕಟ್ಟಿದ್ದು, ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಅವರ ಸಾಲದ ಮೊತ್ತ ಏರಿಕೆಯಾಗಿತ್ತು. ಜೊತೆಗೆ ಜೀವನ ನಿರ್ವಹಣೆಯನ್ನೂ ಮಾಡಬೇಕಿದ್ದ ಕಾರಣ ಮನೆ ಮಾರಾಟ ಮಾಡಿ ಇದರ ಹೊರೆಯಿಂದ ಪಾರಾಗಲು ನಿರ್ಧರಿಸಿದ್ದರು.
ಇದಕ್ಕಾಗಿ ಮಾತುಕತೆಯು ನಡೆದಿದ್ದು, ಇನ್ನೇನು ಅಂತಿಮ ಪ್ರಕ್ರಿಯೆ ನಡೆಯಬೇಕು ಎನ್ನುವ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ಮೊತ್ತದ ಲಾಟರಿ ಅವರ ಕೈ ಹಿಡಿದಿದೆ. ಇದೀಗ ಅವರು ಮನೆ ಉಳಿಸಿಕೊಳ್ಳುವುದರ ಜೊತೆಗೆ ಒಂದಷ್ಟು ಉಳಿತಾಯವನ್ನೂ ಮಾಡಲು ತೀರ್ಮಾನಿಸಿದ್ದಾರೆ.