ಮಧುರೈ: ಶಾಲಾ ಬಾಲಕಿಯರ ಮಧ್ಯೆ ಉಂಟಾದ ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರ ಜುಟ್ಟು ಹಿಡಿದು ಎಳೆದಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ತಮಿಳುನಾಡಿನ ಮಧುರೈನಲ್ಲಿರುವ ಬಸ್ ನಿಲ್ದಾಣದಲ್ಲಿ ಶನಿವಾರ ಶಾಲಾ ವಿದ್ಯಾರ್ಥಿನಿಯರ ನಡುವಿನ ದೀರ್ಘಕಾಲದ ಜಗಳವು ಜುಟ್ಟು ಹಿಡಿದು ಎಳೆಯುವ ಹಂತದವರೆಗೆ ತಲುಪಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಹೌದು, ಜನನಿಬಿಡ ಮಧುರೈ ಪೆರಿಯಾರ್ ಬಸ್ ನಿಲ್ದಾಣವು ವಿದ್ಯಾರ್ಥಿನಿಯರ ನಡುವಿನ ಹೊಯ್ ಕೈಗೆ ಸಾಕ್ಷಿಯಾಗಿತ್ತು. ವರದಿಗಳ ಪ್ರಕಾರ, ವಿದ್ಯಾರ್ಥಿನಿಯರ ಎರಡು ಗುಂಪುಗಳು ಗುರುವಾರದಿಂದ ಜಗಳವಾಡುತ್ತಿದ್ದವು. ಮಾತಿನ ಚಕಮಕಿಗಳಿಗೆ ಸೀಮಿತವಾಗಿದ್ದ ಈ ಜಗಳ ಶನಿವಾರ ಹಿಂಸಾತ್ಮಕ ರೂಪ ಪಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಜುಟ್ಟು ಹಿಡಿದು ಎಳೆದಾಡಿದ್ದಾರೆ.
ಹಲವಾರು ವಿದ್ಯಾರ್ಥಿನಿಯರು ಪರಸ್ಪರ ಕೂದಲಿನಿಂದ ಎಳೆದುಕೊಂಡು, ಒಬ್ಬರನ್ನೊಬ್ಬರು ತಳ್ಳಿದ್ದಾರೆ. ಜಗಳವಾಡುತ್ತಾ ನೆಲದ ಮೇಲೆ ಉರುಳುತ್ತಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿನಿಯರ ಈ ಜಗಳಕ್ಕೆ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿದ್ದರು. ಕೆಲವರು ದೃಶ್ಯದ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಕಳೆದ ವಾರ ತಮಿಳುನಾಡಿನ ಸಾರ್ವಜನಿಕ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮೊದಲು, ಚೆನ್ನೈನ ಬಸ್ ನಿಲ್ದಾಣದಲ್ಲಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿದ್ದರು.