ಬಸ್ ನಿಲ್ದಾಣ, ಹೋಟೆಲ್, ಆಸ್ಪತ್ರೆ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಕಾನೂನನ್ನು ಈಗಾಗಲೇ ಜಾರಿಗೆ ತರಲಾಗಿದೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದ್ದು, ಇದೀಗ ಆರೋಗ್ಯ ಇಲಾಖೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಹೌದು, ಸ್ಟಾಪ್ ಟೋಬ್ಯಾಕೋ (stoptobacco) ಎಂಬ ಆಪ್ ಅನ್ನು ಇದಕ್ಕಾಗಿ ಅಭಿವೃದ್ಧಿಪಡಿಸಲಾಗಿದ್ದು, ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಈ ಆಪ್ ಡೌನ್ಲೋಡ್ ಮಾಡಿಕೊಂಡು, ಸಾರ್ವಜನಿಕರು ಸ್ವತಃ ದೂರು ನೀಡಬಹುದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಧೂಮಪಾನ ಮಾಡುತ್ತಿರುವುದು ಕಂಡು ಬಂದರೆ ಫೋಟೋ ತೆಗೆದು ಅಪ್ಲೋಡ್ ಮಾಡಿದರೆ ಸಾಕು ಎಂದು ಹೇಳಲಾಗಿದೆ. ಇದಕ್ಕಾಗಿ ವ್ಯಕ್ತಿಯ ಫೋಟೋ ತೆಗೆಯುವ ಅಗತ್ಯವಿಲ್ಲ ಎಂಬ ಮಾಹಿತಿಯನ್ನೂ ನೀಡಲಾಗಿದೆ.
ಸಾರ್ವಜನಿಕರು ಧೂಮಪಾನ ಮಾಡುವ ಸ್ಥಳದ ಫೋಟೋ ತೆಗೆದು ಕಳುಹಿಸಿದರೆ ಜಿಪಿಎಸ್ ಆಧರಿತ ಕಾರ್ಯ ನಿರ್ವಹಣೆ ಮಾಡುವ ಈ ಆಪ್, ಅಧಿಕಾರಿಗಳಿಗೆ ಆ ಸ್ಥಳದ ನಿಖರ ವಿವರ ನೀಡುತ್ತದೆ. ಆಗ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಂತಹ ವ್ಯಕ್ತಿಗೆ ದಂಡ ವಿಧಿಸಬಹುದಾಗಿದೆ. ಈ ಸೌಲಭ್ಯದ ಜೊತೆಗೆ ಈ ಆಪ್ ನಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಮಾಹಿತಿಯೂ ಸಿಗುತ್ತದೆ.