ಸಾರ್ವಜನಿಕ ವ್ಯಾಜ್ಯಗಳ ಇತ್ಯರ್ಥ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಈ ಹಿಂದೆ ಇವುಗಳ ಇತ್ಯರ್ಥಕ್ಕೆ 45 ದಿನಗಳ ಸಮಯಾವಕಾಶ ನೀಡಲಾಗಿದ್ದು, ಈಗ 15 ದಿನಗಳನ್ನು ಕಡಿತಗೊಳಿಸಲಾಗಿದೆ.
ಹೀಗಾಗಿ ಇನ್ನು ಮುಂದೆ ಸಾರ್ವಜನಿಕ ವ್ಯಾಜ್ಯಗಳನ್ನು 30 ದಿನಗಳೊಳಗಾಗಿ ಇತ್ಯರ್ಥಪಡಿಸಬೇಕಾಗಿದ್ದು, ಈ ಸಂಬಂಧ ಶುಕ್ರವಾರದಂದು ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ತರಲಾಗುವ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಒಂದೊಮ್ಮೆ ಸಾರ್ವಜನಿಕ ವ್ಯಾಜ್ಯಗಳು 30 ದಿನಗಳೊಳಗಾಗಿ ಇತ್ಯರ್ಥವಾಗದಿದ್ದ ಸಂದರ್ಭದಲ್ಲಿ ಸಂಬಂಧಿತ ಸಚಿವಾಲಯವು ದೂರುದಾರರಿಗೆ ಮಧ್ಯಂತರ ಪ್ರತಿಕ್ರಿಯೆ ಅಥವಾ ವಿವರಣೆಯನ್ನು ನೀಡಬೇಕಿದೆ. ಆಡಳಿತ ವ್ಯವಸ್ಥೆಯ ಮೇಲೆ ಜನತೆಯ ವಿಶ್ವಾಸ ಹೆಚ್ಚಾಗಬೇಕೆಂಬ ಉದ್ದೇಶದಿಂದ ಇಂಥದೊಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.