ದೊಡ್ಡ ದೊಡ್ಡ ಕಂಪನಿಗಳ ಹೆಸರೇಳಿಕೊಂಡು ಮುಗ್ಧರನ್ನು ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೆ ಇವೆ. ಅದ್ರಲ್ಲೂ ಇಂತಾ ಕೇಸ್ ಗಳಲ್ಲಿ ಆನ್ಲೈನ್ ದೋಖಾ ಆಗೋದು ಸಾಮಾನ್ಯ ಆಗೋಗಿದೆ. ಅಮೆಜಾನ್ ಕಂಪನಿಗೆ ಅಂಗಡಿ ಬಾಡಿಗೆ ಕೊಡಿ ಅಂತಾ ಬಂದ ಆರೋಪಿಯೊಬ್ಬ ಮಾಲೀಕನ ಹೆಸ್ರಲ್ಲೆ ಲೋನ್ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಹಿಂದೆ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರದೀಪ ಎನ್ನುವ ವ್ಯಕ್ತಿ, ಕೆಲಸ ಕಳೆದುಕೊಂಡ ಮೇಲೆ ಅದೇ ಕಂಪನಿಯ ಹೆಸರು ಹೇಳಿಕೊಂಡು ಆನ್ಲೈನ್ ವಂಚನೆ ಮಾಡುತ್ತಿದ್ದ. ಅಂಗಡಿಗಳಿರುವ ಮಾಲೀಕರ ಬಳಿ, ನಾವು ಅಮೆಜಾನ್ ಆ್ಯಪ್ ಕಡೆಯಿಂದ ಬಂದಿದ್ದೀವಿ. ಡೆಲಿವರಿ ಮಾಡಬೇಕಿರುವ ಕಂಪನಿಯ ವಸ್ತುಗಳನ್ನ ಇಟ್ಟುಕೊಳ್ಳೋಕೆ ಸ್ಪೇಸ್ ಬೇಕಿತ್ತು ಎಂದು ನಾಟಕವಾಡುತ್ತಿದ್ದ.
ಆನಂತರ ಅಮೆಜಾನ್ ಅವರೇ ನಿಮಗೆ ಆನ್ಲೈನ್ ನಲ್ಲಿ ಬಾಡಿಗೆ ಕಳುಹಿಸುತ್ತಾರೆ ಎಂದು ನಂಬಿಸಿ ಅಂಗಡಿ ರಿಜಿಸ್ಟ್ರೇಷನ್, ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ನಂತಹ ಕೆವೈಸಿ ಡಾಕ್ಯುಮೆಂಟ್ ಗಳನ್ನ ಪಡೆದು ಅವರ ಹೆಸರಲ್ಲೆ ಲೋನ್ ಪಡೆಯುತ್ತಿದ್ದ. ಪೋಸ್ಟ್ ಲೋನ್ ಆ್ಯಪ್ ನಲ್ಲಿ ಅಂಗಡಿ ಮಾಲೀಕನ ಹೆಸರಲ್ಲಿ ಲೋನ್ ಮಾಡಿಸಿ, ಹಣವನ್ನ ತನ್ನ ಅಕೌಂಟಿಗೆ ಕಳುಹಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೀಗೆ ಮೋಸ ಮಾಡಿ ಏನು ತಿಳಿಯದ ಮುಗ್ಧರಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರದೀಪನನ್ನು ಈಶಾನ್ಯ ವಲಯದ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.