ರಾಜ್ಯ ಹಾಗೂ ದೇಶದಲ್ಲಿ ದಾಂಗುಡಿ ಇಟ್ಟ ಕೊರೊನಾ ಎರಡನೇ ಅಲೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, ಕೊರೊನಾ ಜೊತೆಗೆ ಬ್ಲಾಕ್, ವೈಟ್ ಫಂಗಸ್ ಸೇರಿದಂತೆ ವಿವಿಧ ಹೊಸ ಕಾಯಿಲೆಗಳು ಸಹ ವಕ್ಕರಿಸಿಕೊಂಡಿದ್ದವು. ಇದು ಇನ್ನಷ್ಟು ಅನಾಹುತಗಳಿಗೆ ಕಾರಣವಾಗಿತ್ತು.
ಇದೀಗ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ಸಡಿಲಿಕೆಯಾಗಿದೆ. ಪ್ರವಾಸಿ ಸ್ಥಳಗಳು ಸಹ ಸಾರ್ವಜನಿಕರಿಗೆ ಮುಕ್ತವಾಗಿದೆ. ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಸಹ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ.
ಆದರೆ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಬಹಳಷ್ಟು ಮಂದಿ ಕೊರೊನಾ ಭೂಮಂಡಲದಿಂದಲೇ ನಿರ್ಗಮಿಸಿದೆಯೆನೋ ಎಂಬಂತೆ ವರ್ತಿಸುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುತ್ತಿದ್ದು, ಮತ್ತೊಮ್ಮೆ ಮಹಾಮಾರಿ ಅಬ್ಬರಿಸಲು ಕಾರಣರಾಗುತ್ತಾರಾ ಎಂಬ ಆತಂಕ ಸೃಷ್ಟಿಸಿದ್ದಾರೆ.
ಕೊರೊನಾ ಎರಡನೇ ಅಲೆ ಇನ್ನೂ ಪೂರ್ಣಪ್ರಮಾಣದಲ್ಲಿ ತಗ್ಗಿಲ್ಲದ್ದರ ಮಧ್ಯೆ ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ. ಇದೆಲ್ಲದರ ಅರಿವಿದ್ದರೂ ಸಹ ಸಾರ್ವಜನಿಕರು ಮೈಮರೆಯುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಕೇಳಿ ಬರತೊಡಗಿದೆ.